ಕ್ರಿಮಿನಲ್ ಹಿನ್ನೆಲೆ | ಸ್ನೇಹಿತರ ಶ್ರೀಮಂತಿಕೆ ನೋಡಿ ಚಿಕ್ಕ ವಯಸ್ಸಿಗೇ ದಾರಿತಪ್ಪಿದ್ದ ವ್ಯಕ್ತಿ | 17 ವರ್ಷವಾಗಿದ್ದಾಗ ಪೊಲೀಸರ ಹೆಸರಲ್ಲಿ ದಾಖಲೆ ಸೃಷ್ಟಿಸಿ ನಕಲಿ ಡಿಎಲ್
ಬೆಂಗಳೂರು: ಹಿಂದೆ ತನ್ನ ಸಹಪಾಠಿಗಳ ಶ್ರೀಮಂತಿಕೆಯ ಸೆಳೆತಕ್ಕೊಳಗಾಗಿ ದಾರಿ ತಪ್ಪಿದ ಪ್ರೌಢಶಾಲಾ ವಿದ್ಯಾರ್ಥಿ ಇಂದು ರಾಷ್ಟ್ರಮಟ್ಟದ ಕುಖ್ಯಾತ ವಂಚಕ!
ಇದು ಎಐಎಡಿಎಂಕೆ ಪಕ್ಷದ ಚಿಹ್ನೆ ಪಡೆ ಯಲು ಲಂಚದ ಆಮಿಷವೊಡ್ಡಿದ ಪ್ರಕರಣದ ಪ್ರಮುಖ ರೂವಾರಿ ಸುಕೇಶ್ ಚಂದ್ರಶೇಖರ್‌ನ ರೋಚಕ ಬದುಕಿನ ಒನ್‌ಲೈನ್ ಸ್ಟೋರಿ. ಸಾಮಾನ್ಯ ಮಧ್ಯಮವರ್ಗ ಕುಟುಂಬದಲ್ಲಿ ಹುಟ್ಟಿದ್ದ ಸುಕೇಶ್, ತನ್ನ ಶ್ರೀಮಂತ ಕುಟುಂಬದ ಗೆಳೆಯರ ಜೀವನ ಶೈಲಿಗೆ ಆಕರ್ಷಿತನಾಗಿದ್ದ. ಶ್ರೀಮಂತ ಬದುಕು ಕಟ್ಟಿಕೊಳ್ಳಲು ಮುಂದಾದ ಅವನು ತನ್ನ 17ನೇ ವಯಸ್ಸಿಗೇ ವಂಚಕ ಕೃತ್ಯಕ್ಕಿಳಿದು ಪೊಲೀಸರ ಬಲೆಗೆ ಬಿದ್ದಿದ್ದ ಎಂದು ಅಧಿಕಾರಿಗಳು ಹೇಳುತ್ತಾರೆ.
ರಬ್ಬರ್ ಗುತ್ತಿಗೆದಾರ ಚಂದ್ರಶೇಖರ್ ಹಾಗೂ ಮಾಲಾ ದಂಪತಿಯ ಪುತ್ರ ಸುಕೇಶ್, ನಗರದ ಪ್ರತಿಷ್ಠಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿ ದಿನ ಶಾಲೆಗೆ ತನ್ನ ತಂದೆ ಜತೆ ಸ್ಕೂಟರ್‌ನಲ್ಲಿ ಹೋಗಿ ಬರುತ್ತಿದ್ದ. ಆದರೆ ಅವನ ಸಹಪಾಠಿಗಳ ಪೈಕಿ ಬಹುತೇಕರು ಶ್ರೀಮಂತ ಮನೆತನದವರು. ಶಾಲೆಗೆ ಆ ವಿದ್ಯಾರ್ಥಿಗಳು ಐಷಾರಾಮಿ ಕಾರಿನಲ್ಲಿ ಬರುತ್ತಿದ್ದರು. ಚೆಂದದ ಉಡುಪು ಧರಿಸುತ್ತಿದ್ದರು. ಅಂದಿನಿಂದಲೇ ಐಷಾರಾಮಿ ಕಾರುಗಳ ಕ್ರೇಜ್ ಹುಟ್ಟಿಸಿಕೊಂಡ ಸುಕೇಶ್, ಮುಂದೆ ನಾನು ಸಹ ಅವರಂತೆ ಕಾರಿನಲ್ಲಿ ಕಾಲೇಜಿಗೆ ಹೋಗಬೇಕು ಎಂದು ಆಸೆಪಟ್ಟ. ಅಲ್ಲಿಂದ ಪ್ರಾರಂಭವಾಯಿತು ಅವನ ಮೋಸದ ಹಾದಿ.
18 ವರ್ಷ ದಾಟುವ ಮುನ್ನವೇ ಬೆಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಚಾಲನಾ ಪರವಾನಗಿ ಪಡೆದುಕೊಂಡಿದ್ದ ಅವನು, ಬಳಿಕ ತಾನು ‘ಮುಖ್ಯಮಂತ್ರಿಗಳ ಪುತ್ರ’ ಎಂದು ಹೇಳಿಕೊಂಡು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾವರ್ಜನಿಕರನ್ನು ನಂಬಿಸಿ ಅವರಿಂದ ಹಣ ಸುಲಿಗೆ ಮಾಡಿದ್ದ. 2007ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪುತ್ರ ಎಂದು ಹೇಳಿ ಉದ್ಯಮಿಯೊಬ್ಬರಿಗೆ ವಂಚಿಸಿದ್ದ.
ಅಂದು ಪ್ರಥಮ ಬಾರಿಗೆ ಅವನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದರು. ಆನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅವನು, ಮತ್ತೆ ತನ್ನ ಚಾಳಿ ಮುಂದು ವರೆಸಿದ್ದ. 2008ರಲ್ಲಿ ಆಗಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಕ ಎಂದು ಹೇಳಿಕೊಂಡು ವಂಚಿಸಿದ ಪ್ರಕರಣದಲ್ಲಿ ಮತ್ತೆ ಪೊಲೀಸರ ಬಲೆಗೆ ಬಿದ್ದ. ಆ ವೇಳೆಗೆ ಚಿತ್ರ ನಟಿಯರ ಪರಿಚಯವಾಗಿ ಅವನ ಮೋಸದ ಜಾಲದ ಸ್ವರೂಪ ಬದಲಾಯಿತು. ಇದಾದ ನಂತರ ಚೆನ್ನೈಗೆ ಸ್ಥಳಾಂತರ ಗೊಂಡ ಸುಕೇಶ್, ಕೆಲ ವರ್ಷಗಳ ನಂತರ ಹರ್ಯಾಣ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಂಚನೆ ಕೃತ್ಯ ಎಸಗಿದ್ದ.
ಹೀಗಾಗಿ 2011ರ ನಂತರ ಅವನ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ವಿವರಿಸುತ್ತಾರೆ.
