ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

ಬೆಂಗಳೂರು [ಸೆ.18]: ಹಿಂದಿನ ಸರ್ಕಾರದ ಅವಧಿಯಲ್ಲಿ ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಹೇಳಿದರು.

ಮಂಗಳವಾರ ರಾಜಾಜಿನಗರದ ಕೆಎಲ್‌ಇ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ವಿವಿಧ ಶಾಲೆಗಳ ಮಕ್ಕಳೊಂದಿಗೆ ನಡೆಸಿದ ‘ಸಂವೇದನೆ’ ಕಾರ್ಯಕ್ರಮದಲ್ಲಿ ವಿಜ್ಞಾನ, ತಂತ್ರಜ್ಞಾನದಂತಹ ಉನ್ನತ ಶಿಕ್ಷಣ ಪಡೆಯಲು ಇಂಗ್ಲಿಷ್‌ ಮಾಧ್ಯಮದ ಶಾಲೆಗಳನ್ನು ಹೆಚ್ಚಿಸಬೇಕೆಂಬ ಕನ್ನಡ ಮಾಧ್ಯಮದ ಮಕ್ಕಳ ಮನವಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ವಿದ್ಯಾರ್ಥಿ ವೇತನವನ್ನು ಹೆಚ್ಚು ಅಂಕದ (ಮೆರಿಟ್‌) ಆಧಾರದಲ್ಲಿ ನೀಡಬೇಕು. ಆದರೆ ಎಸ್‌ಸಿ, ಎಸ್‌ಟಿ, ಮುಸ್ಲಿಂ ವಿದ್ಯಾರ್ಥಿಗಳೆಂದು ಜನಾಂಗದ ಆಧಾರದ ಮೇಲೆ ನೀಡುವುದು ನಿಲ್ಲಬೇಕು, ಜತೆಗೆ ಹೆಚ್ಚು ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ವಿದ್ಯಾರ್ಥಿ ವೇತನ ನೀಡುವಂತೆ ವಿದ್ಯಾರ್ಥಿನಿಯ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಸಮಾನ ವಿದ್ಯಾರ್ಥಿ ವೇತನ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಚರ್ಚಿ ಅದನ್ನು ಸರಳೀಕರಿಸುತ್ತೇವೆ. ಅಲ್ಲದೇ ಒಂದು ಬಾರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ ಅದೇ ದತ್ತಾಂಶ ಇಟ್ಟುಕೊಂಡು ಪ್ರತಿ ವರ್ಷವೂ ಶಿಷ್ಯ ವೇತನ ನೀಡುವ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಹೊಸ ರೀತಿಯ ಪರೀಕ್ಷಾ ಶೈಲಿ (ಪ್ಯಾಟರ್ನ್‌) ತರಲಾಗುತ್ತಿದೆ, ಈಗಿರುವ ಪಠ್ಯದ ಜತೆ ನೈತಿಕ ಶಿಕ್ಷಣ ನೀಡುವುದು ಅಗತ್ಯವಿದೆ, ನೈತಿಕ ಶಿಕ್ಷಣ ನೀಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮಾಧ್ಯಮದ ಮಕ್ಕಳಿಗೆ ಕೀಳರಿಮೆ ಬರದಂತೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳ ಪಠ್ಯಪುಸ್ತಕಗಳ ಹೊರೆ ಕಡಿಮೆ ಮಾಡಲು ಚಿಂತಿಸಲಾಗುವುದು. ಆರ್‌ಟಿಇ ಕಾಯ್ದೆ ರದ್ದು ವಿಚಾರ ಕೋರ್ಟ್‌ ಅಂಗಳದಲ್ಲಿದ್ದು, ತೀರ್ಪು ಬಂದ ನಂತರವೇ ಆ ಬಗ್ಗೆ ನಿರ್ಧರಿಸಲಾಗುವುದು. ಮಕ್ಕಳ ಸಲಹೆ ಮೇರೆಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಲಾಗುವುದು. ಪ್ರಸ್ತುತ ಸಂವಾದ ಯಶಸ್ವಿಯಾದರೆ ರಾಜ್ಯಾದ್ಯಂತ ಈ ಕಾರ್ಯಕ್ರಮ ಮುಂದುವರಿಸಲಾಗುವುದು ತಿಳಿಸಿದರು.

ಪ್ರಶ್ನೆ, ಮನವಿಗಳ ಸುರಿಮಳೆ

ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಕ್ಕಳು ನಾನಾ ವಿಷಯಗಳ ಬಗ್ಗೆ ದೂರು, ಪ್ರಶ್ನೆ, ಮನವಿಗಳ ಮಳೆಗರೆದರು. ಪ್ರಮುಖವಾಗಿ ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಪಠ್ಯ ಪುಸ್ತಕ ನೀಡಿಲ್ಲ, ನಮ್ಮ ಬ್ಯಾಗ್‌ ತೂಕ ಕಡಿಮೆ ಮಾಡಿ, ಆರ್‌ಟಿಇ ಕಾಯ್ದೆ ರದ್ದಾಗಿದ್ದರಿಂದ ಬಡಮಕ್ಕಳು ಖಾಸಗಿ ಶಾಲೆಯಲ್ಲಿ ಓದಲು ಆಗುತ್ತಿಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಮೀಸಲು ರದ್ದು ಮಾಡಿ ಪಠ್ಯದಲ್ಲಿ ನಮ್ಮ ದೇಶದ ಕವಿಗಳ ಪದ್ಯ ಸೇರಿಸಿ, ಅಂಕ ಪದ್ಧತಿ ಬದಲಾಯಿಸಿ ಹೆಚ್ಚು ಅಂಕ ಗಳಿಸುವಂತೆ ಮಾಡಿ, ವಲಸೆ ಕೆಲಸಗಾರರು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರದ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಸಂವಾದದಲ್ಲಿ ಸುಮಾರು 45 ಶಾಲೆಗಳ 234 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 50ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದರು. ಶಿಕ್ಷಣ ತಜ್ಞ ಗುರುರಾಜ ಕರಜಗಿ ಸೇರಿದಂತೆ ಶಿಕ್ಷಣ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಹಿಂದಿ ದಿವಸ್‌-ಸಚಿವರ ಸಮರ್ಥನೆ

ಕೇಂದ್ರ ಸರ್ಕಾರದ ‘ಹಿಂದಿ ದಿವಸ್‌’ ಆಚರಣೆ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಹಿಂದಿ ಬೇಕು, ಹಿಂದಿ ದಿವಸ್‌ ಆಚರಣೆ ಇಂದಿನಿಂದ ಆರಂಭವಾದುದಲ್ಲ. ಅದು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತದೆ. ಯಾವ ಭಾಷೆಯನ್ನು ಸಹ ಹೇರಿಕೆಯಿಂದ ಕಲಿಸಲಾಗದು ಎಂದು ಹಿಂದಿ ದಿವಸ್‌ ಸಮರ್ಥಿಸಿಕೊಂಡ ಸಚಿವ ಸುರೇಶಕುಮಾರ್‌, ಉನ್ನತ ಶಿಕ್ಷಣ ಕಲಿಯದ ವ್ಯಕ್ತಿಗಳು ಎಂಟತ್ತು ಭಾಷೆ ಮಾತನಾಡುವುದನ್ನು ತಾವು ನೋಡಿರುವುದಾಗಿ ಸುರೇಶ್‌ ಕುಮಾರ್‌ ಹೇಳಿದರು.

ಪಿಯು ವರೆಗೆ ಬಿಸಿಯೂಟ: ಚರ್ಚೆ

ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಿಯುಸಿ ವರೆಗೆ ಬಿಸಿಯೂಟ ಕೊಡುವಂತೆ ಮನವಿ ಬಂದಿದ್ದು, ಅಂಕಿ ಅಂಶಗಳು ಸೇರಿದಂತೆ ವಿವಿಧ ಮಾಹಿತಿ ಪರಿಶೀಲಿಸಿ ತೀರ್ಮಾನಿಸುತ್ತೇವೆ. ‘ಓಪನ್‌ ಬುಕ್‌ ಎಕ್ಸಾಂ’ ಹಿಂದಿದ್ದ ಶಿಕ್ಷಣ ಸಚಿವರ ಪರಿಕಲ್ಪನೆಯಾಗಿದ್ದು, ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಈ ರೀತಿ ಹೇಳಿರಬಹುದೆಂದು ಸುರೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ಪುಸ್ತಕ ಹೊರೆ ತಗ್ಗಿಸಲು ‘ಬ್ಯಾಗ್‌ಲೆಸ್‌ ಡೆ’ ಜಾರಿ ಬಗ್ಗೆ ಚಿಂತನೆ, ಬಸ್‌ಪಾಸ್‌ ವ್ಯವಸ್ಥೆ ಸೇರಿದಂತೆ ಮಕ್ಕಳು ಪ್ರಸ್ತಾಪಿಸಿರುವ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.