ಸರಕಾರ ಅನುದಾನ ಕಡಿತ ಮಾಡಿದ್ದರಿಂದ ತಾನು ವಿಚಲಿತನಾಗಿಲ್ಲ. ಜನರ ಬಳಿ ಹೋಗಿ ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತೇನೆ. ಜನರೇ ದೇವರು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಸುವರ್ಣನ್ಯೂಸ್ ಜೊತೆ ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಭಟ್ಟರು, ಸರಕಾರ ರಾಜಕೀಯ ದುರುದ್ದೇಶದಿಂದಷ್ಟೇ ಇಂಥ ಕ್ರಮ ಕೈಗೊಂಡಿದೆ. ತನ್ನ ಜೊತೆ ಹೋರಾಡುವ ಬದಲು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದ್ದಾರೆ.

ಮಂಗಳೂರು(ಆ. 11): ಬಂಟ್ವಾಳದಲ್ಲಿ ಕಲ್ಲಡ್ಕ ಪ್ರಭಾಕರ್​ ಭಟ್ ಮಾಲಿಕತ್ವದ ಎರಡು​ ಶಾಲೆಗಳ ಅನುದಾನ ರದ್ದು ಪಡಿಸಿದ ರಾಜ್ಯ ಸರಕಾರದ ಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್'​ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನ್ನದ ತಟ್ಟೆ ಹಿಡಿದು ರಾಜ್ಯ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಕಡಿತದಿಂದ ಮಕ್ಕಳ ಬಿಸಿಯೂಟಕ್ಕೆ ತೊಂದರೆಯಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪ.

ಇತ್ತೀಚೆಗೆ ರಾಜ್ಯ ಸರಕಾರ ಕಲ್ಲಡ್ಕ ಪ್ರಭಾಕರ್​ ಭಟ್​ ಅಧ್ಯಕ್ಷತೆಯ ಶ್ರೀರಾಮ ವಿದ್ಯಾಕೇಂದ್ರ ಮತ್ತು ಶ್ರೀದೇವಿ ವಿದ್ಯಾಕೇಂದ್ರಗಳ ಅನುದಾನ ರದ್ದು ಪಡಿಸಿತ್ತು. ಹಿಂದೂ ಧಾರ್ಮಿಕ ದತ್ತಿ ಅಧಿನಿಯಮದಂತೆ ದತ್ತು ಪಡೆಯುವಂತಿಲ್ಲ ಎಂಬ ಕಾರಣವನ್ನು ರಾಜ್ಯ ಸರಕಾರ ನೀಡಿತ್ತು. ಸರಕಾರ ಈ ಕ್ರಮಕ್ಕೆ ರಾಜ್ಯದ್ಯಾಂತ ಆಕ್ರೋಶ ವ್ಯಕ್ತವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟ್'ನಿಂದ ಈ ಎರಡು ಶಾಲೆಗಳಿಗೆ ಅನುದಾನ ದೊರೆಯುತ್ತಿತ್ತು.

'ಜನರ ಬಳಿ ಬಿಕ್ಷೆ ಬೇಡಿ ಅನ್ನ ಹಾಕ್ತೇನೆ'
ಸರಕಾರ ಅನುದಾನ ಕಡಿತ ಮಾಡಿದ್ದರಿಂದ ತಾನು ವಿಚಲಿತನಾಗಿಲ್ಲ. ಜನರ ಬಳಿ ಹೋಗಿ ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತೇನೆ. ಜನರೇ ದೇವರು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ಸುವರ್ಣನ್ಯೂಸ್ ಜೊತೆ ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಭಟ್ಟರು, ಸರಕಾರ ರಾಜಕೀಯ ದುರುದ್ದೇಶದಿಂದಷ್ಟೇ ಇಂಥ ಕ್ರಮ ಕೈಗೊಂಡಿದೆ. ತನ್ನ ಜೊತೆ ಹೋರಾಡುವ ಬದಲು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದ್ದಾರೆ.

"ಹೋರಾಟ ಮಾಡುವುದಾದರೆ ನನ್ನ ಜೊತೆ ಮಾಡಲಿ.. ಮಕ್ಕಳ ಅನ್ನಕ್ಕೆ ಕಲ್ಲು ಹಾಕುವಂಥ, ಅವರ ಗಂಜಿಗೆ ಕೆಸರು ಹಾಕುವಂಥ ಕೆಲಸ ಯಾಕೆ ಮಾಡುತ್ತಾರೆ?" ಎಂದು ಆರೆಸ್ಸೆಸ್ ಮುಖಂಡರೂ ಆಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ.

ಅಹಿಂದ ವಿದ್ಯಾರ್ಥಿಗಳು:
ಭಟ್ಟರ ಶಾಲೆ ಎಂದರೆ ಅದು ಬ್ರಾಹ್ಮಣರ ಶಾಲೆ ಎಂದುಕೊಂಡಿರಬೇಕು. ಆದರೆ, ನಮ್ಮ ಶಾಲೆಯಲ್ಲಿರುವ ಸುಮಾರು 3 ಸಾವಿರ ವಿದ್ಯಾರ್ಥಿಗಳಲ್ಲಿ ಶೇ. 94ರಷ್ಟು ಮಕ್ಕಳು ಸಿದ್ದರಾಮಯ್ಯ ಹೇಳುವ ಅಹಿಂದ ವರ್ಗಕ್ಕೆ ಸೇರುವ ಮಕ್ಕಳೇ ಇದ್ದಾರೆ, ಎಂದು ಪ್ರಭಾಕರ್ ಭಟ್ ತಿಳಿಸಿದ್ದಾರೆ.