ಮಾದಕ ವಸ್ತುಗಳ ಸೇವನೆ ವಿರುದ್ಧ ಕಟ್ಟೆಚ್ಚರ ವಹಿಸಲು ಅಬಕಾರಿ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾದಕವಸ್ತುಗಳ ಸೇವನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.

ಬೆಂಗಳೂರು: ಮಾದಕ ವಸ್ತುಗಳ ಸೇವನೆ ವಿರುದ್ಧ ಕಟ್ಟೆಚ್ಚರ ವಹಿಸಲು ಅಬಕಾರಿ ಇಲಾಖೆ ಕಾರ್ಯಕ್ರಮ ರೂಪಿಸಿದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾದಕವಸ್ತುಗಳ ಸೇವನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಮೂಲಕ ಅಧಿಕಾರಿಗಳಿಗೆ ಮಾದಕ ವಸ್ತು ಪತ್ತೆ ಮತ್ತು ನಿಯಂತ್ರಣ ಕುರಿತಂತೆ ವೃತ್ತಿಪರ ತರಬೇತಿ ಕೊಡಿಸಲಾಗುತ್ತಿದೆ. ಈಗಾಗಲೇ ಐವರು ಅಧಿಕಾರಿಗಳು ತರಬೇತಿ ಪಡೆದಿದ್ದು, ಎರಡನೇ ತಂಡದಲ್ಲಿ 30 ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಇದರಿಂದ ಪರಿಣಾಮಕಾರಿ ಮಾದಕ ವಸ್ತುಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಜಾರಿಗೊಳ್ಳದ ಕಾರಣ ಪ್ರತಿವರ್ಷ ಲಕ್ಷಾಂತರ ಮಕ್ಕಳು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲೂ ಕೂಡ ಅಬಕಾರಿ ಇಲಾಖೆಯ ಜವಾಬ್ದಾರಿಯಾಗಿರುವ ಮಾದಕ ವಸ್ತು ನಿಯಂತ್ರಣ ಕೆಲಸವು ಸಮರ್ಪಕವಾಗಿ ನಡೆಯುತ್ತಿಲ್ಲ. ಅಬಕಾರಿ ಇಲಾಖೆ ಎಂದರೆ ಕೇವಲ ಸರ್ಕಾರಕ್ಕೆ ಮದ್ಯ ಮಾರಾಟದ ಮೂಲಕ ಆದಾಯ ತರುವ ಇಲಾಖೆ ಎಂಬಂತಾಗಿದೆ. ಆದರೆ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅನುಷ್ಠಾನಗೊಳಿಸುವ ಮಹತ್ವದ ಹೊಣೆ ಅಬಕಾರಿ ಇಲಾಖೆ ಮೇಲಿದೆ ಎಂದು ಹೇಳಿದರು. ಶಾಲಾ-ಕಾಲೇಜು ಆವರಣ ಮಾತ್ರವಲ್ಲದೇ ಇನ್ನಿತರ ಸ್ಥಳಗಳಲ್ಲೂ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ಹಾಗೂ ಸೇವನೆ ನಡೆದಿದೆ. ಹೀಗಾಗಿ ಕಳೆದ ವಾರವಷ್ಟೇ ಅಧಿಕಾರಿಗಳ ಸಭೆ ನಡೆಸಿ, ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿತ್ತು. ಈಗಾಗಲೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ 11.70 ಕೇಜಿ ಹಸಿ ಗಾಂಜಾ ಪತ್ತೆಯಾಗಿದ್ದು, ರೆಡ್ಡೆಪ್ಪ ಎಂಬಾತನನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಪತ್ತೆಗಾಗಿ ಅಬಕಾರಿ ಡಿಸಿ ರವಿಶಂಕರ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು.

789 ಬಾರ್‌ಗಳು ಬಂದ್: ಸುಪ್ರಿಂಕೋರ್ಟ್ ಆದೇಶದ ಅನ್ವಯ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಹಾಗೂ ನಗರ ಪ್ರದೇಶದ ಹೊರಗಿನ ವ್ಯಾಪ್ತಿಯ 789 ಬಾರ್‌ಗಳನ್ನು ಸ್ಥಳಾಂತರಿಸಲು ಈಗಾಗಲೇ ಆದೇಶ ನೀಡಲಾಗಿದೆ. ಬೆಂಗಳೂರು ನಗರದ ಹೊರವಲಯದಲ್ಲೇ 200 ಬಾರ್’ಗಳನ್ನು ಸ್ಥಳಾಂತರಿಸುವಂತೆ ಆದೇಶ ನೀಡಲಾಗಿದೆ. ಕಳೆದ ಮೂರು ತಿಂಗಳಿನಿಂದ ಹೆದ್ದಾರಿ ಪಕ್ಕದ ಬಾರ್‌ಗಳ ಮೇಲಿನ ನಿರ್ಬಂಧದ ಪರಿಣಾಮ 500 ಕೋಟಿ ರು.ಗಳ ಆದಾಯ ಖೋತಾ ಆಗಿರುವುದು ನಿಜ. ಅಲ್ಲದೇ ಶೇ.1.21ರಷ್ಟು ಮದ್ಯ ಮಾರಾಟದಲ್ಲಿ ಕುಸಿತ ಉಂಟಾಗಿದೆ. ಹಾಗಂತ ಹೆಚ್ಚು ಮದ್ಯ ಮಾರಾಟ ಮಾಡುವಂತೆ ಒತ್ತಡ ಹೇರುವುದಿಲ್ಲ. ಬದಲಾಗಿ ನಕಲಿ ಮದ್ಯ ಸೇರಿದಂತೆ ಮಾದಕ ವಸ್ತುಗಳ ಮೇಲೆ ನಿಯಂತ್ರಣ ಸಾಧಿಸಿದಲ್ಲಿ ಸಕ್ರಮ ಮದ್ಯ ಮಾರಾಟದಲ್ಲಿ ಚೇತರಿಕೆಯಾಗಲಿದೆ. ಆ ಮೂಲಕ ಆದಾಯ ವೃದ್ಧಿಗೆ ಯತ್ನಿಸಲಾಗುವುದು. ಬೆಂಗಳೂರು ನಗರ ಜಿಲ್ಲೆಯಲ್ಲಿ ವ್ಯಾಪಕ ಕಳ್ಳಭಟ್ಟಿ ಮತ್ತು ನಕಲಿ ಮದ್ಯ ಇದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಯಶವಂತಪುರ ಅಬಕಾರಿ ಡಿಸಿ ರವಿಶಂಕರ್ ನೇತೃತ್ವದಲ್ಲಿ 11 ಜನ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಹೇಳಿದರು.

ಹುಕ್ಕಾ ಬಾರ್‌ಗಳ ಮೇಲೆ ದಾಳಿ: ಬೆಂಗಳೂರು ನಗರದಲ್ಲಿ ಹುಕ್ಕಾ ಬಾರ್‌ಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಅವಧಿಗೂ ಮುನ್ನವೇ ಬೆಳ್ಳಂಬೆಳಗ್ಗೆ ಬಾರ್‌ಗಳು ವಹಿವಾಟು ಆರಂಭಿಸಿದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ನಿಯಮಾನುಸಾರ ಮದ್ಯ ಮಾರಾಟವನ್ನು ನಿಗದಿತ ಅವಧಿಯಲ್ಲೇ ನಡೆಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.