Asianet Suvarna News Asianet Suvarna News

ಮತ್ತೆ ಸದ್ದು ಮಾಡಲಿದೆ ಉಕ್ಕಿನ ಸೇತುವೆ; ಶಿವಾನಂದ ಸರ್ಕಲ್ ನಲ್ಲಿ ಸದ್ಯದಲ್ಲೇ ಕಾಮಗಾರಿ ಶುರು

ಸಾಕಷ್ಟು ವಿವಾದ ಎಬ್ಬಿಸಿದ್ದ ಉಕ್ಕಿನ ಸೇತುವೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ತಲೆ ಎತ್ತುತ್ತಿದೆ. ಆದರೆ ಇದೀಗ ಏರ್ ಪೋರ್ಟ್ ರಸ್ತೆಯಲ್ಲಲ್ಲ. ಬದಲಾಗಿ ಶಿವಾನಂದ ವೃತ್ತದಲ್ಲಿ. ವಿಷಯ ಏನಂದ್ರೆ ವಿವಾದ ಬಳಿಕ ಈ ಕಾಮಗಾರಿ ಆರಂಭಿಸಲು ಯಾವುದೇ ಸಂಸ್ಥೆ ಮುಂದೆ ಬರ್ತಿಲ್ಲ. ಒಂದು ಸಂಸ್ಥೆಗೆ ಹೆಚ್ಚುವರಿ ಟೆಂಡರ್ ನೀಡಿ ಬಿಬಿಎಂಪಿ ವಿವಾದದಲ್ಲಿ  ಸಿಲುಕಿಕೊಂಡಿದೆ.

Steel Bridge Project Begins soon in Shivananda Circle

ಬೆಂಗಳೂರು (ಜೂ.27): ಸಾಕಷ್ಟು ವಿವಾದ ಎಬ್ಬಿಸಿದ್ದ ಉಕ್ಕಿನ ಸೇತುವೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ತಲೆ ಎತ್ತುತ್ತಿದೆ. ಆದರೆ ಇದೀಗ ಏರ್ ಪೋರ್ಟ್ ರಸ್ತೆಯಲ್ಲಲ್ಲ. ಬದಲಾಗಿ ಶಿವಾನಂದ ವೃತ್ತದಲ್ಲಿ. ವಿಷಯ ಏನಂದ್ರೆ ವಿವಾದ ಬಳಿಕ ಈ ಕಾಮಗಾರಿ ಆರಂಭಿಸಲು ಯಾವುದೇ ಸಂಸ್ಥೆ ಮುಂದೆ ಬರ್ತಿಲ್ಲ. ಒಂದು ಸಂಸ್ಥೆಗೆ ಹೆಚ್ಚುವರಿ ಟೆಂಡರ್ ನೀಡಿ ಬಿಬಿಎಂಪಿ ವಿವಾದದಲ್ಲಿ  ಸಿಲುಕಿಕೊಂಡಿದೆ.

ಅಂದಹಾಗೆ ರಾಜಧಾನಿ ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಆಗುತ್ತಿದೆ. 14.48 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಆಂಧ್ರ ಪ್ರದೇಶ ಮೂಲದ ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಜುಲೈ 2ನೇ ವಾರದಲ್ಲಿ ಕಾಮಗಾರಿ ಪ್ರಾರಂಭಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಈ ತಿಂಗಳಾಂತ್ಯದಲ್ಲಿ ಗುತ್ತಿಗೆ ಪಡೆದ ಸಂಸ್ಥೆಗೆ ವರ್ಕ್ ಆರ್ಡರ್ ನೀಡಲು ಪಾಲಿಕೆ ಅಧಿಕಾರಿಗಳು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.

ಏರ್ ಪೋರ್ಟ್ ರಸ್ತೆಯಲ್ಲಿ ನಿರ್ಮಿಸಲು ಹೊರಟಿದ್ದ ಉಕ್ಕಿನ ಸೇತುವೆ ಸಾಕಷ್ಟು ವಿವಾದ ಎಬ್ಬಿಸಿತ್ತು. ಪರಿಸರವಾದಿಗಳ ತೀವ್ರ ವಿರೋಧ ಹಾಗೂ ಗುತ್ತಿಗೆ ಪಡೆದ ಕಂಪನಿಗಳಿಂದ 65 ಕೋಟಿ ರೂ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶಿವಾನಂದ ವೃತ್ತದಲ್ಲಿ ಗುತ್ತಿಗೆ ಪಡೆಯಲು ಹಲವು ಕಂಪನಿಗಳು ಹಿಂದೇಟು ಹಾಕಿವೆ. ಪಾಲಿಕೆ ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ 19.11.2015ರಲ್ಲಿ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಕಂಪನಿ ಭಾಗವಹಿಸಿಲ್ಲ. ಬಳಿಕ 25.5.2016 ರಲ್ಲಿ ಮತ್ತೆ ಟೆಂಡರ್ ಕರೆದಾಗ ಆಂಧ್ರ ಪ್ರದೇಶದ ಮೂಲದ ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಹಾಗೂ ಉದಯ ಶಂಕರ್ ಸಂಸ್ಥೆ ಬಿಡ್ ಭಾಗಿಯಾಗಿತ್ತು. ಆದರೆ ತಂತ್ರಾಂಶದಲ್ಲಿನ (ಟೆಕ್ನಿಕಲ್ ಫಾಲ್ಟ್ ) ಅರ್ಹತೆ ಪಡೆಯಲು ವಿಫಲವಾದ ಉದಯ ಶಂಕರ್ ಸಂಸ್ಥೆ ಟೆಂಡರ್ ಪ್ರಕ್ರಿಯೆಯಿಂದ ಹೊರಗುಳಿಯುವಂತೆ ಆಯಿತು. ಬಳಿಕ ಇದ್ದ ಒಂದೇ ಕಂಪನಿ ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಅದು ಮೂಲ ಪ್ರಸ್ತಾವನೆಗೆ ಶೇ.35.96 ರಷ್ಟು ಹೆಚ್ಚುವರಿ ಟೆಂಡರ್ ಮೊತ್ತ ಸೇರಿ ಯೋಜನೆಗೆ ರಾಜ್ಯ ಸರ್ಕಾರ  ಗ್ರೀನ್ ಸಿಗ್ನಲ್ ನೀಡಿರೋದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೆಜೆಸ್ಟಿಕ್'ನಿಂದ-ವಿಂಡ್ಸರ್ ಮ್ಯಾನರ್, ರೇಸ್ ಕೋರ್ಸ್'ನಿಂದ-ಕುಮಾರ ಕೃಪಾದವರೆಗೆ ಭಾರೀ ಪ್ರಮಾಣದಲ್ಲಿ ವಾಹನ ಸಂಚಾರದ ದಟ್ಟಣೆಯಿರುವುದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಿಗ್ನಲ್ ದಾಟಿ ರೈಲ್ವೇ ಸೇತುವೆಯವರೆಗೆ ಸುಮಾರು 310 ಮೀಟರ್ ಉದ್ದದ ಉಕ್ಕಿನ ಸೇತುವೆ ನಿರ್ಮಿಸಲಾಗುತ್ತದೆ. ನಾಲ್ಕು ಪಥಗಳನ್ನು ಒಳಗೊಂಡಿದ್ದು, ಸುಮಾರು 16 ಮೀಟರ್ ಅಗಲವಾಗಿರುತ್ತದೆ. ಆದರೆ ಮೂಲ ಪ್ರಸ್ತಾವನೆಗಿಂತ ಶೇ.35.96 % ರಷ್ಟು ಹೆಚ್ಚುವರಿ ಗುತ್ತಿಗೆ ನೀಡಿರುವ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ವರ್ಷದಿಂದ ವರ್ಷಕ್ಕೆ ಕಾಮಗಾರಿ ವೆಚ್ಚ ಶೇ.7 ರಿಂದ 10 % ರಷ್ಟು ಅಧಿಕವಾಗುತ್ತೆ. ಆ ಹಿನ್ನೆಲೆಯಲ್ಲಿ ಮೂಲ ಪ್ರಸ್ತಾವನೆಗೆ ಶೇ. ಶೇ.35.96 % ರಷ್ಟು  ಹೆಚ್ಚು ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

 

 

 

 

 

 

 

 

Follow Us:
Download App:
  • android
  • ios