ವಿಧಾನಸಭೆ ಚುನಾವಣೆಗೆ ಅಹಿಂದ ಮತಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೀಸಲಾತಿಯನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಶಾಸನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಬೆಂಗಳೂರು(ಅ.06): ವಿಧಾನಸಭೆ ಚುನಾವಣೆಗೆ ಅಹಿಂದ ಮತಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೀಸಲಾತಿಯನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಶಾಸನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಶಾಸಕರ ಭವನ ಮುಂಭಾಗದಲ್ಲಿ ವಾಲ್ಮೀಕಿ ತಪೋವನ ಹಾಗೂ ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಿ ವಿಧಾನಸೌ‘ದ ಮುಂಭಾಗದಲ್ಲಿ ನಡೆದ ರಾಜ್ಯ ಮಟ್ಟದ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಅವರು, ರಾಜ್ಯ ಸರ್ಕಾರ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅನುಸಾರ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ಪ್ರಮಾಣವನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡು ವಂತೆ ಶಾಸನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ನೆರೆಯ ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಜನಸಂಖ್ಯೆಗೆ ಅನುಗುಣವಾಗಿ ಶೇ.50ಕ್ಕೆ ಮೀರಿದ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯದಲ್ಲೂ ಕೂಡ ಜನಸಂಖ್ಯೆ ಆಧಾರಿತ ಮೀಸಲಾತಿ ವ್ಯವಸ್ಥೆ ಜಾರಿಗೆ ಬರಬೇಕಾದ ಅಗತ್ಯವಿದೆ ಎಂದರು. ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿ ನಿಯಮವನ್ನು 2013ರಲ್ಲಿ ಜಾರಿಗೊಳಿಸುವ ಮೂಲಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟುಗಳ ಜನರ ಅಭಿವೃದ್ಧಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 26,800 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಹಾಗೂ ಪರಿಶಿಷ್ಟ ಜಾತಿಗೆ ಶೇ.17 ರಷ್ಟು ಒಟ್ಟು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಇದು ದೇಶದಲ್ಲೇ ಮೊದಲು ಎಂದು ತಿಳಿಸಿದರು.

ನಮ್ಮ ಸರ್ಕಾರ ಅಹಿಂದ ಮಾತ್ರವಲ್ಲದೇ ಎಲ್ಲ ಜಾತಿ-ಜನಾಂಗಗಳ ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಅಶಕ್ತರು, ವೃದ್ಧರು ಹೀಗೆ ಎಲ್ಲ ವರ್ಗದವರನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಆಧಾರದ ಮೇಲೆ ಆಡಳಿತ ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮುಂಚೆ ನೀಡಿದ ವಚನದಂತೆಯೇ ನಡೆದುಕೊಂಡಿದ್ದೇವೆ. ಉಳುವವನೇ ಹೊಲದೊಡೆಯ ಮಾದರಿಯಲ್ಲಿ ವಾಸಿಸುವವನೇ ಮನೆಯೊಡೆಯ ಕಾನೂನು ಜಾರಿಗೆ ತಂದಿದ್ದೇವೆ ಎಂದು ಪುನರುಚ್ಚರಿಸಿದರು.

ಡಿಸೆಂಬರ್‌ನಲ್ಲಿ ಬಳ್ಳಾರಿ ಸಮಾವೇಶ:

ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ವಿಧಾನಸೌಧದ ಅವರಣದಲ್ಲಿ ಸ್ಥಾಪಿಸಬೇಕೆಂದು ನಮ್ಮ ಸರ್ಕಾರ ನಿ‘ರ್ರಿಸಿತ್ತು. ಅದಕ್ಕಾಗಿಯೇ 2.5 ಎಕರೆ ಜಾಗವನ್ನು ಕೂಡ ನೀಡಲಾಗಿತ್ತು. ಅದರ ಪರಿಣಾಮವಾಗಿ ಈಗ ವಾಲ್ಮೀಕಿ ತಪೋವನ ಮತ್ತು ಪುತ್ಥಳಿ ನಿರ್ಮಾಣಗೊಂಡಿದೆ. ಪರಿಶಿಷ್ಟ ವರ್ಗದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧತೆಯನ್ನು ಪ್ರದರ್ಶಿಸಿದೆ. ವಾಲ್ಮೀಕಿ ಜನಾಂಗದ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಈ ಕುರಿತಂತೆಯೇ ಸುದೀರ್ಘವಾಗಿ ಚಿಂತನೆ ನಡೆಸಲು ಡಿಸೆಂಬರ್‌'ನಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಜನಾಂಗದ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು.

ಕಳೆದ ಐದಾರು ವರ್ಷಗಳಿಂದ ರಾಜ್ಯದಲ್ಲಿ ಸತತ ಬರಗಾಲ ಉಂಟಾಗಿತ್ತು. ಕಳೆದ ಮೂರು ವರ್ಷಗಳಂತೂ ಮಳೆ ಇಲ್ಲದೇ ನಾಡಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಉತ್ತಮ ಮಳೆ ಬಂದಿರುವುದರಿಂದ ರೈತರ ಮೊಗದಲ್ಲಿ ಕಳೆ ಕಾಣುತ್ತಿದೆ. ಮುಂಗಾರಿನ ಮೊದಲು ಎರಡು ತಿಂಗಳು ಮಳೆ ಕಡಿಮೆಯಾದರೂ ನಂತರ ಉತ್ತಮ ಪ್ರಮಾಣದಲ್ಲಿ ಮಳೆ ಸುರಿದಿದೆ. ರೈತರು ಮತ್ತು ನಾಡಿನ ಜನರ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಪರಿಶಿಷ್ಟ ಜನಾಂಗದ ಕಲ್ಯಾಣಕ್ಕಾಗಿ ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪರಿಶಿಷ್ಟ ಜನಾಂಗಕ್ಕೆಂದೇ 14,940 ಕೋಟಿ ರು. ಗಳನ್ನು ವೆಚ್ಚ ಮಾಡಿರುವುದೇ ಇದಕ್ಕೆ ನಿದರ್ಶನ. ಮಹರ್ಷಿ ವಾಲ್ಮೀಕಿ ಸಂಶೋ‘ನಾ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆಗೆ 10 ಎಕರೆ ಜಮೀನು ಕೂಡ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಪರಿಶಿಷ್ಟ ಜನಾಂಗಕ್ಕೆ ರಾಜಕೀಯದಲ್ಲಿ ಮೀಸಲಾತಿ ನೀಡಿರುವ ಮಾದರಿಯಲ್ಲೇ ಶಿಕ್ಷಣ ಮತ್ತು ಉದ್ಯೋಗದಲ್ಲೂ ಶೇ.7.5ರಷ್ಟು ಮೀಸಲಾತಿ ನೀಡಬೇಕು ಹಾಗೂ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮರಾಜ್ಯದ ಪರಿಕಲ್ಪನೆ ಕಟ್ಟಿಕೊಟ್ಟವರು. ಎಲ್ಲ ಜಾತಿ-ಜನಾಂಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಪುತ್ಥಳಿಯನ್ನು ಶಕ್ತಿಕೇಂದ್ರದಲ್ಲಿ ಅನಾವರಣಗೊಳಿಸಿರುವುದು ಸ್ವಾಭಿಮಾನದ ಪ್ರತೀಕವಾಗಿದೆ. ಮುಂಬರುವ ಅಧಿವೇಶನದಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಈ ಜನಾಂಗಕ್ಕೆ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಪ್ರಸಕ್ತ ಸಾಲಿನ ಮಹರ್ಷಿ ವಾಲ್ಮೀಕಿ ಪುರಸ್ಕಾರವನ್ನು ಚಳ್ಳಕೆರೆಯ ಮಾಜಿ ಸಚಿವ ತಿಪ್ಪೇಸ್ವಾಮಿ ಅವರಿಗೆ ಸಿಎಂ ಸಿದ್ದರಾಮಯ್ಯ ಪ್ರದಾನ ಮಾಡಿದರು. ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನ ಪರಿಷತ್ ಸ‘ಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಎಂ.ಆರ್.ಸೀತಾರಾಂ, ಉಮಾಶ್ರೀ, ಎಚ್. ಎಂ.ರೇವಣ್ಣ, ರುದ್ರಪ್ಪ ಲಮಾಣಿ, ಮೇಯರ್ ಆರ್.ಸಂಪತ್‌ರಾಜ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಪರಿಶಿಷ್ಟ ಜಾತಿಗಳ ಕಲ್ಯಾಣ ಸಮಿತಿ ಅ‘್ಯಕ್ಷ ಕೆ.ಶಿವಮೂರ್ತಿ ನಾಯಕ್, ಸಂಸದರಾದ ಬಿ.ವಿ.ನಾಯಕ್, ಬಿ.ಶ್ರೀರಾಮುಲು, ಪ್ರಕಾಶ್ ಹುಕ್ಕೇರಿ, ಶಾಸಕರಾದ ಕೆ.ಎನ್.ರಾಜಣ್ಣ, ಎನ್. ವೈ.ಗೋಪಾಲಕೃಷ್ಣ, ಶಿವನಗೌಡ ನಾಯಕ್, ಬಿ. ಶಿವಣ್ಣ, ಎಸ್.ರಘು, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಇಲಾಖೆ ನಿದೇರ್ಶಕ ಕೆ. ರೇವಣಪ್ಪ, ಇಲಾಖೆ ಸಲಹೆಗಾರ ಇ.ವೆಂಕಟಯ್ಯ ಮತ್ತಿತರರು ಪಾಲ್ಗೊಂಡಿದ್ದರು.