Asianet Suvarna News Asianet Suvarna News

ವರಮಹಾಲಕ್ಷ್ಮಿ ಹಬ್ಬಕ್ಕೂ ಇಲ್ಲ ಸರ್ಕಾರದ ರೇಷ್ಮೆ ಸೀರೆ :ಮತ್ತೆ ಯಾವಾಗ.?

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ರಾಜ್ಯದ ಮಹಿಳೆಯರಿಗೆ ದುಬಾರಿ ಮೈಸೂರು ರೇಷ್ಮೆ ಸೀರೆಯನ್ನು ರಿಯಾಯಿತಿಯಲ್ಲಿ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಸೀರೆ ನೀಡುವ ಕಾರ್ಯಕ್ರಮದ ಬಗ್ಗೆ ಸದ್ಯ ಯಾವುದೇ ವಿಚಾರವನ್ನು ಪ್ರಸ್ತಾಪಿಸಿಲ್ಲ. 

State Govt Free Saree Distribution program Postponed
Author
Bengaluru, First Published Aug 24, 2018, 7:58 AM IST

ಬೆಂಗಳೂರು :  ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ರಾಜ್ಯದ ಮಹಿಳೆಯರಿಗೆ ದುಬಾರಿ ಮೈಸೂರು ರೇಷ್ಮೆ ಸೀರೆಯನ್ನು ಭಾರಿ ರಿಯಾಯಿತಿಯಲ್ಲಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ತನ್ನ ಮಾತಿಗೆ ತಪ್ಪಿದೆ. ವರಮಹಾಲಕ್ಷ್ಮೇ ಪ್ರಯುಕ್ತ 20 ಸಾವಿರ ರು. ಮೌಲ್ಯದ ರೇಷ್ಮೆ ಸೀರೆಯನ್ನು 4,500 ರು.ಗೆ ನೀಡುವುದಾಗಿ ಘೋಷಿಸಿದ್ದ ಸರ್ಕಾರವು ಯಾವುದೇ ಮುನ್ಸೂಚನೆ ನೀಡದೆ ಕಾರ್ಯಕ್ರಮ ಮುಂದೂಡಿದೆ.

ಹೀಗಾಗಿ, ಸರ್ಕಾರವು ಪ್ರಚಾರಕ್ಕಾಗಿ ಮಹಿಳೆಯರಿಗೆ ಮೈಸೂರು ರೇಷ್ಮೆ ಸೀರೆ ಆಸೆ ತೋರಿಸಿ ಯಾವುದೇ ಮುನ್ಸೂಚನೆ ನೀಡದೆ ಯೋಜನೆ ಮುಂದೂಡಿದೆ ಎಂದು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಆಗಸ್ಟ್‌ 15ಕ್ಕೆ ಸೀರೆ ವಿತರಿಸುವುದಾಗಿ ಸರ್ಕಾರ ಹೇಳಿದ್ದನ್ನು ನಂಬಿಕೊಂಡು ಆ ದಿನ ಮಹಿಳೆಯರು ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಸರ್ಕಾರಿ ಮೈಸೂರು ಸಿಲ್‌್ಕ ಮಳಿಗೆಗಳಿಗೆ ಧಾವಿಸಿದ್ದರು. ಆಗ ರಿಯಾಯ್ತಿ ದರದಲ್ಲಿ ಸೀರೆ ನೀಡದೆ, ವರಮಹಾಲಕ್ಷ್ಮಿ ಹಬ್ಬಕ್ಕೆ ನೀಡುತ್ತೇವೆ ಎಂದು ಟೋಕನ್‌ ಕೊಟ್ಟು ಅಧಿಕಾರಿಗಳು ಸಾಗಹಾಕಿದ್ದರು. ಅದರಂತೆ ಈಗ ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಗುರುವಾರ ಮಹಿಳೆಯರು ಮತ್ತೊಮ್ಮೆ ರೇಷ್ಮೆ ಸೀರೆ ಮಳಿಗೆಗಳಿಗೆ ಬಂದಿದ್ದರು. ಆದರೆ, ಈಗಲೂ ರಿಯಾಯ್ತಿ ದರದಲ್ಲಿ ಅವರಿಗೆ ಸೀರೆ ಲಭಿಸಿಲ್ಲ.

ರೇಷ್ಮೆ ಇಲಾಖೆ ಹಾಗೂ ಕೆಎಸ್‌ಐಸಿ ಅಧಿಕಾರಿಗಳು, ‘ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ ಸೀರೆ ನೀಡಲು ಸಾಧ್ಯವಾಗಿಲ್ಲ. ಸೀರೆ ವಿತರಣೆ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದ ಕಾರಣ ಸಮಸ್ಯೆ ಉಂಟಾಗಿದೆ’ ಎಂದು ಕನ್ನಡಪ್ರಭಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಅವರು, ಒಂದೂವರೆ ತಿಂಗಳ ಹಿಂದೆ 16ರಿಂದ 20 ಸಾವಿರ ರು. ದುಬಾರಿ ಮೌಲ್ಯದ ರೇಷ್ಮೆ ಸೀರೆ ಖರೀದಿ ಮಾಡಲು ಎಲ್ಲರಿಗೂ ಆರ್ಥಿಕ ಶಕ್ತಿ ಇರುವುದಿಲ್ಲ. ಆದರೆ ಬಡ ಮಹಿಳೆಯರಿಗೂ ರೇಷ್ಮೆ ಸೀರೆ ಧರಿಸಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ವರ ಮಹಾಲಕ್ಷ್ಮೇ ಹಬ್ಬದ ಪ್ರಯುಕ್ತ ಸರ್ಕಾರದ ವತಿಯಿಂದ ರೇಷ್ಮೆ ಸೀರೆ ಕೊಡುಗೆ ನೀಡುತ್ತಿದ್ದೇವೆ. ಕೆಎಸ್‌ಐಸಿ ಮಳಿಗೆಯಲ್ಲಿ ಮಹಿಳೆಯರು 4,500 ರು. ಹಣ ಹಾಗೂ ಆಧಾರ್‌ ಸಂಖ್ಯೆ ನೀಡಿ ಸೀರೆ ಪಡೆಯಬಹುದು ಎಂದು ಘೋಷಿಸಿದ್ದರು.

ಬಳಿಕ ಜುಲೈ 30ರಂದು ವಿಧಾನಸೌಧದಲ್ಲಿ ಮಾತನಾಡಿದ್ದ ಅವರು, ವರ ಮಹಾಲಕ್ಷ್ಮೇ ಹಬ್ಬಕ್ಕೆ ಕಡ್ಡಾಯವಾಗಿ ಸೀರೆ ವಿತರಣೆ ಮಾಡುತ್ತೇವೆ. ಆದರೆ ಕುಟುಂಬಕ್ಕೆ ಒಂದು ಸೀರೆ ಮಾತ್ರ ವಿತರಣೆ ಮಾಡಿದರೆ ಕುಟುಂಬದಲ್ಲಿರುವ ಇತರೆ ಮಹಿಳೆಯರು ಬೇಸರಗೊಳ್ಳುತ್ತಾರೆ. ಹೀಗಾಗಿ ಮನೆಗೆ ಎಷ್ಟುಸೀರೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಮಾನದಂಡ ರೂಪಿಸಿ ವರಮಹಾಲಕ್ಷ್ಮೇ ಹಬ್ಬಕ್ಕೆ ಸೀರೆ ವಿತರಿಸಲಾಗುವುದು. ರಿಯಾಯಿತಿ ದರದ ಸೀರೆ ವಿತರಣೆಯಿಂದ ಆಗಲಿರುವ 6 ಕೋಟಿ ರು. ನಷ್ಟವನ್ನು ರೇಷ್ಮೆ ಇಲಾಖೆ ಹಾಗೂ ಕೆಎಸ್‌ಐಸಿ ತಲಾ ಶೇ.50ರಷ್ಟುಭರಿಸಲಿವೆ ಎಂದು ಪುನರುಚ್ಛರಿಸಿದ್ದರು.

ಆದರೆ, ಬಿಪಿಎಲ್‌ ಕುಟುಂಬಕ್ಕೆ ಒಂದು ಎಂದು ಪರಿಗಣಿಸಿದರೂ 1.18 ಕೋಟಿ ಸೀರೆಗಳು ಬೇಕಾಗುತ್ತವೆ. ಅಷ್ಟುಸೀರೆಗಳ ಲಭ್ಯತೆ ಇಲ್ಲ. ಜತೆಗೆ ಕೆಎಸ್‌ಐಸಿ ಹಿರಿಯ ಅಧಿಕಾರಿಗಳ ಪ್ರಕಾರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಲು ಕೆಎಸ್‌ಐಸಿ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಕೆಎಸ್‌ಐಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಇದೂ ಕೂಡ ಮುಂದೂಡಲು ಒಂದು ಕಾರಣ ಎಂದು ಹೇಳಲಾಗಿದೆ.

ಏಕಾಏಕಿ ರದ್ದು, ಮಹಿಳೆಯರು ಗರಂ:

ಆದರೆ ವರಮಹಾಲಕ್ಷ್ಮೇ ಹಬ್ಬದ ಪ್ರಯುಕ್ತ ಆಧಾರ್‌ ಕಾರ್ಡ್‌ ಹಾಗೂ ಹಣದೊಂದಿಗೆ ಕೆಎಸ್‌ಐಎಎಲ್‌ ಮಳಿಗೆಗೆ ತೆರಳುತ್ತಿರುವ ಮಹಿಳೆಯರನ್ನು ಸಿಬ್ಬಂದಿ ವಾಪಸು ಕಳುಹಿಸಿದ್ದಾರೆ. ಯೋಜನೆ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಿಮಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಮಹಿಳೆಯರು ಸರ್ಕಾರ ಹಾಗೂ ರೇಷ್ಮೆ ಇಲಾಖೆ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಟಿಲಿಟಿ ಕಟ್ಟಡದ ಕೆಎಸ್‌ಐಎಲ್‌ ಸಿಲ್‌್ಕ ಮಳಿಗೆಗೆ ಆಗಮಿಸಿದ್ದ ಶಿಲ್ಪಾ, ಸರ್ಕಾರಕ್ಕೆ ರೇಷ್ಮೆ ಸೀರೆ ಕೊಡಿ ಎಂದು ಯಾರೂ ಬೇಡಿರಲಿಲ್ಲ. ಸರ್ಕಾರವೇ ವರಮಹಾಲಕ್ಷ್ಮೇ ಹಬ್ಬಕ್ಕೆ 4,500 ರು.ಗೆ ದುಬಾರಿ ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿತ್ತು. ಇದರಿಂದ ವೈಟ್‌ಫೀಲ್ಡ್‌ನಿಂದ ಎಂ.ಜಿ. ರಸ್ತೆವರೆಗೂ ತೆರಳಿದ್ದೆವು. ಆದರೆ ಸಿಬ್ಬಂದಿ ರಿಯಾಯಿತಿ ಇಲ್ಲ ಎಂದು ವಾಪಸು ಕಳುಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಕೊಡಲು ಸರ್ಕಾರಕ್ಕೆ ಏನಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟೋಕನ್‌ ಕೂಡ ಸಿಗಲಿಲ್ಲ:

ಮತ್ತೊಬ್ಬ ಮಹಿಳೆ ಸರಳಾ ಮಾತನಾಡಿ, ನಮಗಿಂತ ಮೊದಲು ತೆರಳಿದವರಿಗೆ ಯೋಜನೆಯನ್ನು ಮುಂದೂಡಲಾಗಿದೆ. ರಿಯಾಯಿತಿ ದರದ ಸೀರೆ ವಿತರಣೆ ಯೋಜನೆ ಬಂದಾಗ ಈ ಟೋಕನ್‌ನೊಂದಿಗೆ ಹಣ ನೀಡಿ ಸೀರೆ ಪಡೆಯಬಹುದು ಎಂದು ಟೋಕನ್‌ ವಿತರಿಸಿದ್ದಾರೆ. ನಾವು ತಡವಾಗಿ ಆಗಮಿಸಿದ್ದೇವೆ ಎಂದು ಟೋಕನ್‌ ಕೂಡ ನೀಡಿಲ್ಲ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳಿಗೆಗಳ ಬಳಿ ಗಲಾಟೆ:

ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿದ್ದ ಕೆಎಸ್‌ಐಎಲ್‌ ಮಳಿಗೆಗಳಿಗೆ ಸಾರ್ವಜನಿಕರು ಭೇಟಿ ನೀಡಿ ರಿಯಾಯಿತಿ ರದ್ದಾಗಿರುವುದರಿಂದಾಗಿ ಗಲಾಟೆ ಮಾಡಿದರು. ಯಾವುದೇ ಮುನ್ಸೂಚನೆ ನೀಡದೆ ಕಾರ್ಯಕ್ರಮ ರದ್ದು ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನ ಬಸವೇಶ್ವರನಗರ, ಜ್ಯುಬಿಲಿ ಶೋ ರೂಂ, ಕೆ.ಜಿ. ರಸ್ತೆ, ಗಾಂಧಿ ಬಜಾರ್‌, ಬಸವನಗುಡಿ, ಮಲ್ಲೇಶ್ವರ ವೃತ್ತ, ಜಯನಗರ ಮಳಿಗೆಗಳಲ್ಲಿ ಗ್ರಾಹಕರು ರಿಯಾಯಿತಿ ಬೆಲೆಯ ಸೀರೆ ಕೇಳಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಸಿಬ್ಬಂದಿ ಹೇಳಿದ್ದಾರೆ.

ಇನ್ನು ಮೈಸೂರಿನ ಮಾನಂದವಾಡಿ ರಸ್ತೆ, ಇಂದಿರಾನಗರ ಜೂ ಮುಖ್ಯರಸ್ತೆ, ಜೆಎಲ್‌ಬಿ ರಸ್ತೆ, ಕೆ.ಆರ್‌. ನಗರ, ಇಂದಿರಾನಗರ ಹಾಗೂ ದಾವಣಗೆರೆ, ಚನ್ನಪಟ್ಟಣದ ಮಳಿಗೆಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ.

ಮೈಸೂರು ಪಾಲಿಕೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದಾಗಿ ಸೀರೆ ವಿತರಣೆ ಸಾಧ್ಯವಾಗಿಲ್ಲ. ಹೀಗಾಗಿ ವಿತರಣೆ ಮುಂದೂಡಲಾಗಿದೆ. ರೇಷ್ಮೆ ಸೀರೆ ವಿತರಣೆಗೆ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಇಲಾಖೆ ಮನವಿ ಮಾಡಿಕೊಂಡಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

- ಭಾನುಪ್ರಕಾಶ್‌, ಮಾರುಕಟ್ಟೆವ್ಯವಸ್ಥಾಪಕರು, ಕೆಎಸ್‌ಐಸಿ

ಶ್ರೀಕಾಂತ್‌ ಎನ್‌. ಗೌಡಸಂದ್ರ

Follow Us:
Download App:
  • android
  • ios