ಕಡೆಗೂ ಸರ್ಕಾರಿ ಬಸ್ ನೌಕರರಿಗೆ ವರ್ಗಭಾಗ್ಯ | ಕೆಎಸ್ಸಾರ್ಟಿಸಿ ಸೇರಿ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಬಹುಕಾಲದ ಬೇಡಿಕೆಯಾಗಿದ್ದ ಅಂತರ್ ನಿಗಮ ವರ್ಗ ಕುರಿತಂತೆ ಆದೇಶ ಹೊರಡಿಸಿದೆ.
ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಸರಿ ಸುಮಾರು ನಾಲ್ಕು ಸಾವಿರ ನೌಕರರಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, ದಶಕಗಳ ಕಾಲದ ಬೇಡಿಕೆಯಾಗಿದ್ದ ಒಂದು ಬಾರಿಯ ಅಂತರ್ ನಿಗಮ ವರ್ಗಾವಣೆಯ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಈ ವಿಷಯ ತಿಳಿಸಿದರು. ರಾಜ್ಯದಲ್ಲಿ 2007ಕ್ಕೂ ಮೊದಲು ಆಯಾ ನಿಗಮಗಳ ಒಳಗೆ ನೌಕರರ ವರ್ಗಾವಣೆ ಮಾಡಲು ವ್ಯವಸ್ಥಾಪಕ ನಿರ್ದೇಶಕರಿಗೆ ವರ್ಗಾವಣೆಯ ಅಧಿಕಾರ ಇತ್ತು. ನಂತರ ಈ ವ್ಯವಸ್ಥೆಯನ್ನು ರದ್ದುಗೊಳಿಸಲಾಯಿತು. ಅದಾದ ಬಳಿಕ ನೌಕರರು ಅಂತರ್ ನಿಗಮ ವರ್ಗಾವಣೆ ಒತ್ತಾಯಿಸುತ್ತಲೇ ಬಂದಿದ್ದರು. ಹೀಗಾಗಿ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಒಂದು ಬಾರಿಯ ಅಂತರ್ ನಿಗಮ ವರ್ಗಾವಣೆ ಚಾಲನೆ ನೀಡಿತ್ತು ಎಂದು ವಿವರಿಸಿದರು.

ಒಂದು ಬಾರಿಯ ಅಂತರ್ ನಿಗಮ ವರ್ಗಾವಣೆಗೆ ಕೋರಿ ಸುಮಾರು 14,418 ವಿವಿಧ ಹುದ್ದೆಗಳ ನೌಕರರು ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಧವೆಯರು, ಅನಾರೋಗ್ಯ, ಅಂಗವಿಕಲರು, ದಂಪತಿಗಳು, ಮತ್ತಿತರ ಪ್ರಕರಣಗಳನ್ನು ಒಳಗೊಂಡು ಶೇ.10ರಷ್ಟು ಮೀಸಲಾತಿ ನಿಗದಿ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು 4 ಸಾವಿರ ಅರ್ಹ ನೌಕರರನ್ನು ವರ್ಗಾವಣೆ ಮಾಡಲಾಗಿದೆ.
ಈ ಮೂಲಕ ನೌಕರರ ದಶಕಗಳ ಕಾಲದ ಹಳೆಯ ಬೇಡಿಕೆ ಈಡೇರಿದಂತಾಗಿದೆ. ವರ್ಗಾವಣೆ ವೇಳೆ ನೌಕರರು ಸಂಘಟನೆಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾರಿಗೂ ಅನ್ಯಾಯ, ಅಸಮಾಧಾನ ಆಗದ ರೀತಿಯಲ್ಲಿ ಪ್ರಕ್ರಿಯೆ ನಿರ್ವಹಿಸಲಾಗಿದೆ ಎಂದು ಹೇಳಿದರು.
