ಒಂದೆಡೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್ ಸೋಲಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಳಕೆ ವಿರುದ್ಧ ಪುನಃ ಕಾಂಗ್ರೆಸ್ ಸಮರ ಆರಂಭಿಸಿದೆ.
ಬೆಂಗಳೂರು (ಡಿ.16): ಒಂದೆಡೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಕಾಂಗ್ರೆಸ್ ಸೋಲಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿದ್ದಂತೆಯೇ ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಳಕೆ ವಿರುದ್ಧ ಪುನಃ ಕಾಂಗ್ರೆಸ್ ಸಮರ ಆರಂಭಿಸಿದೆ.
ಮುಂಬರುವ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಬದಲಾಗಿ ಮತಪತ್ರದ (ಬ್ಯಾಲೆಟ್ ಪೇಪರ್) ಮೂಲಕವೇ ಮತದಾನಕ್ಕೆ ಅವಕಾಶ ನೀಡುವಂತೆ ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ|ಜಿ.ಪರಮೇಶ್ವರ್ ಅವರು ಮತಯಂತ್ರದ ವಿರುದ್ಧ ಆಯೋಗದ ಮೊರೆ ಹೋಗುವುದಾಗಿ ಹೇಳಿದ ಮರುದಿನವೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಇವಿಎಂ ವಿರುದ್ಧ ದನಿ ಎತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದ ಸಚಿವರಾದ ಆಂಜನೇಯ, ರಾಮಲಿಂಗಾರೆಡ್ಡಿ ಹಾಗೂ ರೇವಣ್ಣ ಅವರು ಸಹ ಇವಿ ಎಂ ಬದಲಾಗಿ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಯಬೇಕೆಂದು ಗಂಟಲೇರಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇವಿಎಂ ದುರ್ಬಳಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪತ್ರ ಬರೆದು, ನಂತರ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದರು. ತೀರ್ಮಾನ ಮಾಡುವ ಅಧಿಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಯಲ್ಲೇ ಇದೆ. ತಮಗೆ ಬೇಕಾದವರನ್ನು ಕೇಂದ್ರ ಸರ್ಕಾರ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಾರೆ. ಹೀಗಾಗಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದರು. ನಂತರ ಕೇಂದ್ರ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಕೆ ಮಾಡುವಂತೆ ಮನವಿ ಮಾಡುವುದಾಗಿ ಸಿದ್ದರಾಮಯ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇವಿಎಂ ದುರ್ಬಳಕೆ ನಡೆಯುತ್ತಿದೆ ಎಂಬುದಾಗಿ ನಾನೊಬ್ಬನೇ ಹೇಳುತ್ತಿಲ್ಲ. ಉತ್ತರ ಪ್ರದೇಶ ಚುನಾವಣೆ ವೇಳೆ ಮಾ ಯಾವತಿ, ಅಖಿಲೇಶ್ ಯಾದವ್ ಮಾತ್ರವಲ್ಲ ದೇ ಸ್ವತಃ ಬಿಜೆಪಿ ಹಿರಿಯ ಮುಖಂಡ ಎಲ್. ಕೆ.ಅಡ್ವಾಣಿ ಕೂಡ ಹೇಳಿದ್ದರು’ ಎಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತಯಂತ್ರದ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು. ಈ ಹಿಂದೆ ಹಲವು ಚುನಾವಣೆಗಳಲ್ಲಿ ಇವಿಎಂ ಬಳಸಿದ್ದರೂ ಯಾರೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಆಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನು ಪುಷ್ಟೀಕರಿಸುವಂತೆ ಉತ್ತರ ಪ್ರದೇಶದಲ್ಲಿ ಇವಿಎಂ ಬಳಸದಿರುವ ಕಡೆ ಬಿಜೆಪಿ ಹೀನಾಯವಾಗಿ ಸೋತಿದೆ. ಇವಿಎಂ ಬಳಸಿರುವ ಕಡೆ ಬಿಜೆಪಿಗೆ ಬಂಪರ್ ಫಲಿತಾಂಶ ಬಂದಿದೆ. ಹೀಗಾಗಿ ಸಹಜವಾಗಿಯೇ ಅನುಮಾನ ವ್ಯಕ್ತವಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಇವಿಎಂ ಬಳಕೆ ಯಲ್ಲಿ ಮೋಸ ನಡೆಯುತ್ತಿದೆ ಎಂಬ ಆರೋಪ ಸಾಕಷ್ಟು ಕೇಳಿ ಬರುತ್ತಿದೆ. ಈಗಾಗಲೇ ಚುನಾ ವಣೆ ನಡೆದಿರುವ ರಾಜ್ಯಗಳಲ್ಲಿ ಮುಸ್ಲಿಮರು ಹೆಚ್ಚು ವಾಸಿಸುವ ಪ್ರದೇಶದಲ್ಲೂ ಬಿಜೆಪಿ ಮತ ಬಂದಿವೆ ಎಂಬ ಅಪಸ್ವರ ಕೇಳಿ ಬಂದಿದೆ. ಹೀಗಾಗಿ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ಚುನಾವಣಾ ಆಯೋಗ ಅವಕಾಶ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಒತ್ತಾಯಿಸಿದರು.
