ಕೊಲಂಬೋ[ಏ.24]: ಈಸ್ಟರ್‌ ಭಾನುವಾರದ ವೇಳೆ ನಡೆದ ದಾಳಿಗಳಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯರು ಭಾಗಿಯಾಗಿರುವ ಬಗ್ಗೆ ವಿಚಾರಣೆಯಿಂದ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಬುರ್ಖಾ ನಿಷೇಧಿಸುವ ಬಗ್ಗೆ ಶ್ರೀಲಂಕಾ ಸರ್ಕಾರ ಚಿಂತನೆ ನಡೆಸಿದೆ.

ಪ್ರಕರಣದಲ್ಲಿ ಭಾಗಿಯಾದ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಿದ ವೇಳೆ, ಬುರ್ಖಾ ಧರಿಸಿದ ಮಹಿಳೆಯರು ದಾಳಿಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ ಅನೇಕ ಉಗ್ರರು ಬುರ್ಖಾ ಧರಿಸಿ ಪರಾರಿಯಾಗಿದ್ದಾರೆ. ಹೀಗಾಗಿ ಮಸೀದಿಗಳ ಮೌಲ್ವಿಗಳ ಜೊತೆ ಚರ್ಚಿಸಿ ಬುರ್ಖಾ ನಿಷೇಧ ಜಾರಿಗೆ ತರುವ ನಿಟ್ಟಿನಿಂದ ಸಚಿವ ಸಂಪುಟದ ಸದಸ್ಯರು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಉಗ್ರರು ತಮ್ಮ ಕೃತ್ಯಗಳಿಗೆ ಮಹಿಳೆಯರ ನೆರವು ಪಡೆಯುವ ನಿಟ್ಟಿನಲ್ಲಿ ಅವರಿಗೆ ಬುರ್ಖಾ ಧರಿಸಿ ಕರೆತರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕಾಗಿ ಈಗಾಗಲೇ ಚಾದ್‌, ಕ್ಯಾಮರೂನ್‌, ಗಬಾನ್‌, ಮೊರಾಕ್ಕೋ, ಆಸ್ಟ್ರೀಯಾ, ಬಲ್ಗೇರಿಯಾ, ಡೆನ್ಮಾರ್ಕ್, ಫ್ರಾನ್ಸ್‌, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.