Asianet Suvarna News Asianet Suvarna News

ಪಂಚರಾಜ್ಯ ಚುನಾವಣೆ: ಬಿಜೆಪಿ ಗೆಲುವಿನ ಬಗ್ಗೆ ಶಾ ಹೇಳಿದ್ದೇನು?

ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಆದರೂ, ಪಕ್ಷ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಮಿತ್ ಶಾ. ಏನಂತಾರೆ ಶಾ?

Special Interview BJP President Amit Shah Speaks On Five States Election
Author
New Delhi, First Published Nov 23, 2018, 5:17 PM IST

2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯೇ ಜಯಭೇರಿ ಬಾರಿಸುತ್ತದೆ ಎಂದು ಅಮಿತ್‌ ಶಾ ಟೈಮ್ಸ್‌ ನೌ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

1) ಪಂಚರಾಜ್ಯ ಚುನಾವಣೆ ಕೇಂದ್ರ ಸರ್ಕಾರಕ್ಕೆ ನಿರ್ಣಾಯಕ. ಈ ಚುನಾವಣೆಯಲ್ಲಿ ಏನಾಗಬಹುದೆಂದು ಊಹಿಸಿದ್ದೀರಿ?

ಯಾವುದೇ ಚುನಾವಣೆ ಬರಲಿ ಶಾ ಜನರ ಬಳಿ ಹೋಗುತ್ತಾರೆ. ಏಕೆಂದರೆ ಜನರು ಹಣೆಬರಹವನ್ನು ನಿರ್ಧರಿಸುತ್ತಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಭಾರತೀಯ ಜನತಾ ಪಾರ್ಟಿ ಉತ್ತಮ ರಾರ‍ಯಲಿ ನಡೆಸಿದೆ. ಐದೂ ರಾಜ್ಯಗಳಲ್ಲಿ ಪ್ರಕಾಶಿಸಲಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ನಮ್ಮದೇ ಸರ್ಕಾರ ರಚನೆಯಾಗಲಿದೆ. ಉಳಿದಂತೆ ಮಿಜೋರಂ ಮತ್ತು ತೆಲಂಗಾಣದಲ್ಲಿ ಕಳೆದ ಬಾರಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಮಿಜೋರಂನಲ್ಲಿ ನಮ್ಮದೇ ಸರ್ಕಾರ ರಚನೆಯಾಗುತ್ತದೆ.

2) ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೇ ಮತ್ತು ಅಮಿತ್‌ ಶಾ ಮಧ್ಯೆ ಭಿನ್ನಾಭಿಪ್ರಾಯವಿದೆ. ಅವರಲ್ಲಿ ಹೊಂದಾಣಿಕೆಯಿಲ್ಲ ಎಂಬುದು ನಿಜವೇ?

ಭಿನ್ನಾಭಿಪ್ರಾಯದ ಮಾತೇ ಇಲ್ಲ. ವಸುಂಧರಾ ರಾಜೇ ಮತ್ತು ನನ್ನ ನಡುವೆ ಯಾವುದೇ ಸ್ಪರ್ಧೆ ಇಲ್ಲ. ಎಲ್ಲ ರಾಜ್ಯಗಳಲ್ಲಿ ನಮ್ಮ ಪಕ್ಷ ಜಯಗಳಿಸುವಂತೆ ಮಾಡುವುದು, ಅತಿ ಹೆಚ್ಚು ಸೀಟು ಪಡೆಯುವಂತೆ ಮಾಡುವುದು ನನ್ನ ಜವಾಬ್ದಾರಿ. ನನ್ನ ಎಲ್ಲಾ ಪ್ರಯತ್ನಗಳೂ ಅಂತಿಮವಾಗಿ ರಾಜೇ ಅವರಿಗೆ ಸಹಾಯ ಮಾಡುವುದು. ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದರ ಹೊರತಾಗಿ ವೈಯಕ್ತಿಕವಾಗಿಯೂ ಸಮಸ್ಯೆ ಇಲ್ಲ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಮೋದಿ-ಶಾ ಹೊಸ ಅಸ್ತ್ರ..!

3) ಆದರೆ ವಸುಂಧರಾ ರಾಜೇ ನಾಲ್ಕೂವರೆ ವರ್ಷದಲ್ಲಿ ಏನೂ ಕೆಲಸ ಮಾಡಿಲ್ಲ. ಜನರ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವಿದೆಯಲ್ಲವೇ?

ಒಬ್ಬ ಮುಖ್ಯಮಂತ್ರಿ 5 ವರ್ಷ ಪೂರೈಸಿದಾಗ ಇಂಥ ಆರೋಪಗಳು ಸಾಮಾನ್ಯ. ರಾಜಸ್ಥಾನದ ಜನರು ಮೋದಿ ಜೊತೆಗಿದ್ದಾರೆ, ವಸುಂಧರಾ ರಾಜೇ ಮತ್ತು ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ರಾಜ್ಯದ 9 ಜಿಲ್ಲೆಗಳಿಗೆ ಹೋಗಿದ್ದೆ. ಅಲ್ಲಿನ ಕಾರ್ಯಕರ್ತರ ಶ್ರಮದ ಬಗ್ಗೆ ನನಗೆ ತೃಪ್ತಿ ಇದೆ. ಸೂಕ್ಷ್ಮವಾಗಿ ಗಮನಿಸಿದ್ದೇನೆ. ಜನರನ್ನೂ ಸಂಪರ್ಕಿಸಿದ್ದೇನೆ. ನಾವು ಅಲ್ಲಿ ಗೆದ್ದೇ ಗೆಲ್ಲುತ್ತೇವೆ.

4) ಆದರೆ ಯಾವ ಸಮೀಕ್ಷೆಯೂ ಹೀಗೆ ಹೇಳಿಲ್ಲವಲ್ಲಾ?

ನಮ್ಮದು ಒಂದೇ ಕುಟುಂಬ. ಕಾಂಗ್ರೆಸ್ಸು ಒಂದು ಒಡೆದ ಮನೆ. ಕೊನೆ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದೂ ಅವರಲ್ಲಿ ನಿರ್ಧಾರವಾಗಿಲ್ಲ. ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ನ 3 ಉಪವಿಭಾಗಗಳಿವೆ. ಹೆಸರಿಗೆ ಎರಡೇ ಗುಂಪುಗಳಿದ್ದರೂ ಸೆಂಟ್ರಲ್‌ ಕಾಂಗ್ರೆಸ್‌ ಗ್ರೂಪ್‌ ಎಂಬ ಮತ್ತೊಂದು ಗುಂಪಿದೆ. ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ. 7 ತಿಂಗಳ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಮ್ಮ ಸೀಟುಗಳು 14ರಿಂದ 79ಕ್ಕೆ ಏರಿಕೆಯಾಗಿವೆ. ನೀವೇ ನೋಡಿ ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಪರ ಇರುತ್ತದೆ.

5) ಹಿಂದಿ ರಾಜ್ಯಗಳಲ್ಲಿ ಅಂದರೆ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 65 ಸೀಟುಗಳನ್ನು ಪಡೆದಿದ್ದಿರಿ. ಅದು ಮತ್ತೊಮ್ಮೆ ಮರುಕಳಿಸುತ್ತಾ? ಏಕೆಂದರೆ ಈ ರಾಜ್ಯಗಳಲ್ಲಿ ನಿಮಗೆ ವಿರೋಧಿ ಅಲೆಯಿದೆ.

ವಿರೋಧಿ ಅಲೆ ಎಲ್ಲಾ ಚುನಾವಣೆಗೆ ಅನ್ವಯವಾಗುವುದಿಲ್ಲ. ಆಡಳಿತ ಪಕ್ಷದ ಬಗ್ಗೆ ಕೆಲ ಜನರಿಗೆ ಅಸಮಾಧಾನ ಇರಬಹುದು. ಬಡತನ ನಿರ್ಮೂಲನೆಗೆ ಸ್ವಾತಂತ್ರ್ಯಾನಂತರದಲ್ಲಿ ಮೋದಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮಾಡಿಲ್ಲ. ಕನಿಷ್ಠ 22 ಕೋಟಿ ಕುಟುಂಬಗಳಿಗೆ ಮೋದಿ ಸರ್ಕಾರ ಭದ್ರತೆ ಒದಗಿಸಿಕೊಟ್ಟಿದೆ. ಉದಾಹರಣೆಗೆ ಗ್ಯಾಸ್‌ ಸಿಲಿಂಡರ್‌ ವಿತರಣೆ. ಟಾಯ್ಲೆಟ್‌ ನಿರ್ಮಾಣದಿಂದ ಮಹಿಳೆಯರು ಘನತೆ, ಗೌರವದಿಂದ ಬದುಕುವಂತಾಗಿದೆ. ಯುವ ಮಹಿಳೆಯರು ಕೂಡ ಮುದ್ರಾ ಯೋಜನೆಯಡಿ ಸಾಲ ಪಡೆದು ಬ್ಯೂಟಿ ಪಾರ್ಲರ್‌ ತೆರೆಯಬಹುದು. ಹೀಗೆ 22 ಕೋಟಿ ಕುಟುಂಬಗಳಿಗೆ ನೆರವಾಗಿದ್ದೇವೆ. ಆ ಎಲ್ಲಾ ಕುಟುಂಬಗಳೂ ಮೋದಿ ಹಿಂದಿವೆ.

ಇದನ್ನೂ ಓದಿ: ಮಂಗ್ಳೂರಲ್ಲಿ ಸಿದ್ಧವಾಯ್ತು ಚಾಣಕ್ಯ ಪಂಚಸೂತ್ರ.. ಕ್ಲಿಕ್ ಆದರೆ ವಿರೋಧಿಗಳು ನೀರ್ನಾಮ!

6) ನೀವೇ ಹೇಳಿದ ಹಾಗೆ ಕೆಲ ವರ್ಗದ ಜನರಲ್ಲಿ ಅಸಮಾಧಾನವಿದೆ. ಇದನ್ನೇ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುತ್ತಿವೆ. ಅಪನಗದೀಕರಣ ಮತ್ತು ನಿರುದ್ಯೋಗ ಸಮಸ್ಯೆ ನಿಮಗೆ ಹಿನ್ನಡೆ ಉಂಟುಮಾಡುವುದಿಲ್ಲವೇ?

ಅಪನಗದೀಕರಣಕ್ಕೆ ಎರಡು ವರ್ಷವಾಗಿದೆ. ಅದಾದ ಬಳಿಕ 9 ಚುನಾವಣೆಗಳು ನಡೆದಿವೆ. ಎಂಟರಲ್ಲಿ ನಾವೇ ಗೆದ್ದಿದ್ದೇವೆ. ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿದೆ. ಸಂದೇಹವೇ ಇಲ್ಲ, ಕರ್ನಾಟಕದಲ್ಲಿಯೂ ಬಿಜೆಪಿಯೇ ಗೆದ್ದಿದ್ದು. ಈಗ ವಿರೋಧಿಗಳು ಮೈತ್ರಿ ಮಾಡಿಕೊಂಡಿರಬಹುದು. ಆದರೆ ಜನ ಗೆಲ್ಲಿಸಿದ್ದು ಬಿಜೆಪಿಯನ್ನು. ನಾವು ನಿಜವಾದ ಜಯಶಾಲಿಗಳು.

7) ಹಾಗಾದರೆ ಗೋವಾ, ಮಣಿಪುರದಲ್ಲಿ ನೀವು ಜನಾದೇಶವನ್ನು ಧಿಕ್ಕರಿಸಿದ್ದಕ್ಕೆ ಏನು ಹೇಳುತ್ತೀರಿ?

ಗೋವಾ, ಮಣಿಪುರದಲ್ಲಿ ಜನಾದೇಶ ಬಿಜೆಪಿಗೆ ವಿರುದ್ಧವಾಗಿತ್ತು ನಿಜ. ಆದರೆ ನಮ್ಮ ಓಟ್‌ ಶೇರ್‌ ಪ್ರತಿಶತ ಹೆಚ್ಚಿತ್ತು. ಮಣಿಪುರದಲ್ಲೂ ನಮ್ಮ ಓಟ್‌ ಶೇರ್‌ ಶೇ.2ರಿಂದ 31ಕ್ಕೆ ಏರಿಕೆಯಾಗಿತ್ತು. ಅದಕ್ಕೂ ಮೊದಲು ಮಣಿಪುರದಲ್ಲಿ ಬಿಜೆಪಿಯ ಒಂದೇ ಒಂದು ಸೀಟು ಇರಲಿಲ್ಲ. ಇದರ ಆಧಾರದ ಮೇಲೆ ವಿಶ್ಲೇಷಣೆ ಮಾಡಿ.

ಇದನ್ನೂ ಓದಿ: ಮಂಗಳೂರಿಗೆ ಅಮಿತ್ ಶಾ: ಭೇಟಿಯ ಹಿಂದಿನ ಮಾಸ್ಟರ್ ಪ್ಲ್ಯಾನ್ ಏನು?

8) ನೀವು ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸಿಲ್ಲವಾ ಅಥವಾ 2019ರ ಚುನಾವಣೆಗೆ ತಕ್ಕ ಅಭ್ಯರ್ಥಿ ಅಲ್ಲ ಎಂದು ಭಾವಿಸಿದ್ದೀರಾ?

ನಾನು ಆ ರೀತಿ ಯೋಚಿಸಿಲ್ಲ. ದೇಶದ ಜನತೆ ಮತ್ತು ಅವರ ಪಕ್ಷ ಅದನ್ನು ತೀರ್ಮಾನಿಸಬೇಕು. ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಾರೆ. ಅದಾದ ಕೆಲವೇ ನಿಮಿಷದಲ್ಲಿ ಪಕ್ಷದ ಮತ್ತೊಬ್ಬ ಸದಸ್ಯ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ. ಯಾಕೆ ಹೇಳಿ?

9) ಮಹಾಗಠಬಂಧನದ ಹೊರತಾಗಿಯೂ 2014ರಲ್ಲಿ ನೀವು ಗೆದ್ದ ರಾಜ್ಯಗಳಲ್ಲಿ ವಿರೋಧಿ ಅಲೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ 2014ರಲ್ಲಿ ಮೋದಿ ಅಲೆ ಇತ್ತು, ಆದರೆ ಈಗ?

5 ವರ್ಷ ಜನ ನಮ್ಮ ಆಡಳಿತ ನೋಡಿದ್ದಾರೆ. ಮೋದಿ ಮಾತ್ರ ನಮ್ಮ ದೇಶವನ್ನು ಮುಂದೆ ತರಬಲ್ಲರು ಎಂದು ಮನಗಂಡಿದ್ದಾರೆ. ಮೋದಿ ಮಾತ್ರ ದೇಶವನ್ನು ಮತ್ತಷ್ಟುಸುಭದ್ರವಾಗಿಡಬಲ್ಲರು, ಬಡತನ ನಿವಾರಣೆ ಮಾಡಬಲ್ಲರು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೆಮ್ಮೆ ಪಡುವಂತೆ ಮಾಡಬಲ್ಲರು ಎಂದು ನಂಬಿದ್ದಾರೆ. ಇನ್ನು ಮಹಾಗಠಬಂಧನ ಬಗ್ಗೆ ಹೇಳುವುದಾದರೆ, ಹಿಂದೆ ಮಾಯಾವತಿ ಒಂದು ಹೇಳಿಕೆ ನೀಡಿದ್ದರು, ‘ಪ್ರಬಲ ಸರ್ಕಾರ ಬೇಡ, ರಾಜಿ ಸರ್ಕಾರ ಬೇಕು’ ಎಂದು. ಇವತ್ತು ನಾನು ಜನರನ್ನೇ ಕೇಳುತ್ತೇನೆ, ಪ್ರಬಲ ಸರ್ಕಾರ ಬೇಕೇ ಅಥವಾ ರಾಜಿ ಸರ್ಕಾರ ಬೇಕೇ? ಎರಡೂ ಸರ್ಕಾರಗಳನ್ನೂ ಜನ ನೋಡುತ್ತಿದ್ದಾರೆ. ಪ್ರಬಲ ಸರ್ಕಾರ ವೈರಿದೇಶಕ್ಕೆ ನುಗ್ಗಿ ಸರ್ಜಿಕಲ್‌ ಸ್ಟೈಕ್‌ ನಡೆಸಿದೆ ಮತ್ತು ದೇಶದ ಸೈನ್ಯವನ್ನು ಮೇಲೆತ್ತಿದೆ. 4 ವರ್ಷದಲ್ಲಿ ದೇಶದ ಆರ್ಥಿಕತೆಯನ್ನು 9ನೇ ಸ್ಥಾನದಿಂದ 4ನೇ ರಾರ‍ಯಂಕ್‌ಗೆ ಏರಿಸಿದೆ. ಪ್ರಬಲ ಸರ್ಕಾರದ ಸುಧಾರಣೆಗಳನ್ನು ವಿಶ್ವ ಬ್ಯಾಂಕ್‌ ಶ್ಲಾಘಿಸಿದೆ. ಹಣದುಬ್ಬರವನ್ನು ತಗ್ಗಿಸಿದೆ. ಭಯೋತ್ಪಾದನೆಯನ್ನು ತಹಬದಿಗೆ ತಂದಿದೆ. ದೇಶದ ಜನರಿಗೆ ವಿದ್ಯುತ್‌, ಶೌಚಾಲಯ ಒದಗಿಸಿದೆ. ರಾಜಿ ಸರ್ಕಾರಗಳು ಇದ್ದಲ್ಲಿ ಎಲ್ಲರೂ ಅವರವರ ಸ್ಥಾನದಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ದೇಶದ ಪ್ರಜೆಗಳು ಬಲಹೀನ, ರಾಜಿ ಸರ್ಕಾರವನ್ನೇ ಬಯಸುತ್ತಾರೆ ಎಂದು ನನಗನಿಸುವುದಿಲ್ಲ.

10) ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ರಾಹುಲ್‌ ಗಾಂಧಿ ರಾಜಿ ಮಾಡಿಕೊಳ್ಳುತ್ತಾರಂತೆ?

ಮಹಾಗಠಬಂಧನ ಇದ್ದರೂ ಬಿಜೆಪಿಗೆ ಸಮಸ್ಯೆ ಇಲ್ಲ. ಯುಪಿ ಏನಾಗುತ್ತದೆ ಎಂಬುದು ವಿಷಯವೇ ಅಲ್ಲ. ನಾವು ಸ್ಪರ್ಧೆಗೆ ಸಿದ್ಧರಿದ್ದೇವೆ. ನಾನಿವತ್ತು ವಿಶ್ವಾಸದಿಂದ ಹೇಳುತ್ತಿದ್ದೇನೆ - ಯುಪಿಯಲ್ಲಿ ನಮ್ಮ ಸೀಟುಗಳ ಸಂಖ್ಯೆ 73ರಿಂದ 74ಕ್ಕೆ ಏರಿಕೆಯಾಗುತ್ತದೆ.

ಇದನ್ನೂ ಓದಿ: 'ಶಾ ಪರ್ಶಿಯನ್ ಹೆಸರು, ಅದನ್ನು ಮೊದಲು ಬದಲಾಯಿಸಿ'!

11) ಎಲ್ಲಾ ಸ್ಥಳಗಳು ಮರುನಾಮಕರಣಗೊಳ್ಳುತ್ತಿವೆ. ಇಸ್ಲಾಮೋಫೋಬಿಯಾ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರಲ್ಲಾ?

ಎಲ್ಲಾ ಸ್ಥಳಗಳು ಎನ್ನುವುದು ಸರಿಯಲ್ಲ. ಅಲಹಾಬಾದ್‌, ಫೈಜಾಬಾದ್‌ ಹೆಸರು ಬದಲಾಗಿದೆ. ಮುಘಲ್‌ಸರಾಯ್‌ ಹೆಸರೂ ಬದಲಾಗಿದೆ, ಕಾರಣ ದೀನದಯಾಳ್‌ ಅದೇ ಸ್ಥಳದಲ್ಲಿ ಹತ್ಯೆಯಾಗಿದ್ದರು. ಅದೊಂದು ಭಾವನಾತ್ಮಕ ವಿಷಯ. ಇನ್ನು ಅಹಮದಾಬಾದ್‌ನಲ್ಲಿ ಆ ನಗರದ ಜನರೇ ಬದಲಾವಣೆ ಬಯಸುತ್ತಿದ್ದಾರೆ. 19 ರಾಜ್ಯಗಳಲ್ಲಿ ನಮ್ಮ ಸರ್ಕಾರವಿದೆ. ಪ್ರತಿ ರಾಜ್ಯದಲ್ಲೂ ಅಲ್ಪಸಂಖ್ಯಾತರಿದ್ದಾರೆ. ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರು ಓಟ್‌ಬ್ಯಾಂಕ್‌ಗಾಗಿ ಏನೇನೋ ಹಬ್ಬಿಸುತ್ತಿದ್ದರೆ ಏನು ಮಾಡಲು ಸಾಧ್ಯ?

12) ಅಮಿತ್‌ ಶಾ ಹೆಸರಲ್ಲಿ ‘ಶಾ’ ಎಂಬುದು ಪರ್ಷಿಯನ್‌ ಪದವಂತೆ. ಹಾಗಾಗಿ ನೀವೂ ಹೆಸರು ಬದಲಿಸಿಕೊಳ್ಳುತ್ತೀರಾ ಎಂದು ಕೆಲವರು ಕೇಳುತ್ತಿದ್ದಾರೆ. ನೀವಿದನ್ನು ಗಂಭೀರವಾಗಿ ಪರಿಗಣಿಸಿದ್ದೀರಾ?

ಇಲ್ಲವೇ ಇಲ್ಲ. ನನಗೆ ಪರ್ಷಿಯನ್‌ ಭಾಷೆ ಗೊತ್ತಿಲ್ಲ. ನನ್ನ ಹೆಸರಿನ ಮೂಲದ ಬಗ್ಗೆಯೂ ಗೊತ್ತಿಲ್ಲ. ತಿಳಿದುಕೊಂಡು ಹೇಳುತ್ತೇನೆ. ಯಾರಾದರೂ ಸಂಶೋಧಕರಿಗೆ ಆಸಕ್ತಿಯಿದ್ದರೆ ಸಂಶೋಧನೆ ಮಾಡಬಹುದು.

Follow Us:
Download App:
  • android
  • ios