ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರು ಪರ್ಶಿಯನ್ ಮೂಲದ್ದು! ತಾಕತ್ತಿದ್ದರೆ ಬಿಜೆಪಿ ಮೊದಲು ಶಾ ಹೆಸರನ್ನು ಬದಲಾಯಿಸಲಿ! ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ವ್ಯಂಗ್ಯ! ಗುಜರಾತ್ ಹೆಸರೂ ಕೂಡ ಪರ್ಶಿಯನ್ ಮೂಲದ್ದು ಎಂದ ಹಬೀಬ್! ಆರ್‌ಎಸ್‌ಎಸ್ ನಿಂದ ಇಸ್ಲಾಮಿಕ್ ಮೂಲದ ಹೆಸರನ್ನು ಬದಲಿಸುವ ಹುನ್ನಾರ
ಆಗ್ರಾ(ನ.11): ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ವಿವಿಧ ಪ್ರದೇಶಗಳ ಹೆಸರು ಬದಲಾವಣೆಯನ್ನು ಮುಂದಿಟ್ಟುಕೊಂಡು ವ್ಯಂಗ್ಯವಾಡಿರುವ ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್, ಪರ್ಶಿಯನ್ ಹೆಸರು ಇಟ್ಟುಕೊಂಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನೂ ಬದಲಾಯಿಸಿ ಎಂದು ಆಗ್ರಹಿಸಿದ್ದಾರೆ.
'ಶಾ' ಎಂಬುದು ಪರ್ಶಿಯನ್ ಮೂಲದ ಹೆಸರಾಗಿದ್ದು, ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಮೊದಲು ಬಿಜೆಪಿ ಬದಲಾಯಿಸಲಿ ಎಂದು ಹಬೀಬ್ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಗುಜರಾತ್ ಕೂಡ ಪರ್ಶಿಯನ್ ಮೂಲದ ಹೆಸರಾಗಿದ್ದು, ಈ ಮೊದಲು ಅದನ್ನು ಗುರ್ಜರಾತ್ರ ಎಂದು ಕರೆಯಲಾಗುತ್ತಿತ್ತು ಎಂದು ಹಬೀಬ್ ತಿಳಿಸಿದ್ದಾರೆ.
ಆರ್‌ಎಸ್ಎಸ್ ಹಿಂದುತ್ವ ನೀತಿಗೆ ಅನುಗುಣವಾಗಿ ಬಿಜೆಪಿ ಸರ್ಕಾರಗಳು ಮರುನಾಮಕರಣ ಮಾಡುತ್ತಲೇ ಇದೆ. ನೆರೆಯ ದೇಶ ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದಿರುವ ಹೆಸರನ್ನು ಹೆಸರನ್ನು ಬದಲಾಯಿಸಿದಂತೆ, ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಹಿಂದುಯೇತರವಾದ ಎಲ್ಲವನ್ನು ವಿಶೇಷವಾಗಿ ಇಸ್ಲಾಮಿಕ್ ಮೂಲದ ಹೆಸರನ್ನು ಬದಲಿಸಲು ಬಯಸುತ್ತಾರೆ ಎಂದು ಹಬೀಬ್ ಹರಿಹಾಯ್ದರು.
ಆಗ್ರಾ ನಗರವನ್ನು ಆಗ್ರಾವನ ಎಂದು ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಇರ್ಫಾನ್ ಈ ಹೇಳಿಕೆ ಹೇಳಿದ್ದಾರೆ.
