ಭೋಪಾಲ್(ಫೆ.07): ‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ..’ ಅನ್ನೋ ಗಾದೆ ಮಾತನ್ನು ಕೇಳಿಯೇ ನಾವು ನೀವೆಲ್ಲಾ ಬೆಳೆದಿದ್ದು.

ಆದರೆ ಇಲ್ಲೋರ್ವ ಇದನ್ನು ಕೊಂಚ ತಿರುಗಿಸಿ ‘ನಮಸ್ತೆ ಅಂದವನಿಗೆ ರೋಗವಿಲ್ಲ’ ಅಂತಾ ಬದಲಾಯಿಸಿದ್ದಾರೆ. ಹೌದು, ಭೋಪಾಲ್‌ನ ರಿಜನಲ್ ಇನ್ಸಿಟ್ಯೂಟ್ ಆಫ್ ಎಜ್ಯುಕೇಶನ್ ಶಾಲೆಯಲ್ಲಿ ನಡೆಯುತ್ತಿರುವ ‘ಶಾಲಾ ವಿಜ್ಞಾನದಲ್ಲಿ ಆಧುನಿಕ ಪದ್ದತಿ ಮತ್ತು ಆವಿಷ್ಕಾರಗಳು’ಎಂಬ ಕಾರ್ಯಾಗಾರದಲ್ಲಿ ವಿಜ್ಞಾನಿಯೊಬ್ಬರು ಹೀಗೆ ಹೇಳಿದ್ದಾರೆ.

ಹಣೆಗೆ ಸಿಂಧೂರ ಇಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಒಬ್ಬರು ಹೇಳಿದರೆ, ತುಳಸಿ ಗಿಡದ ಸುತ್ತ ಸುತ್ತುವುದರಿಂದ ದೇಹ ತಂಪಾಗಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ವಿಜ್ಞಾನಿಯೊಬ್ಬರು ನಮಸ್ತೆ ಹೇಳುವುದರಿಂದ ರೋಗದಿಂದ ದೂರ ಇರಬಹುದು ಎಂದು ವಾದ ಮಂಡಿಸಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ ಈ ಕಾರ್ಯಾಗಾರದಲ್ಲಿ ಮಂಡಿಸಿದ ಯಾವುದೇ ಸಂಶೋಧನಾ ವರದಿಗೂ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ಧಾರೆಯ ವಿಜ್ಞಾನಿಗಳು ಶಾಲಾ ಆವರಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಕಾರ್ಯಾಗಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.