ದುಬೈನ ಹೊರವಲಯದಲ್ಲಿ ಅಲೆದಾಡುತ್ತಿದ್ದ ಒಂದು ವಿಚಿತ್ರ ಪ್ರಾಣಿಯನ್ನು ನೋಡಿದ್ದಾಗಿ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಆ ಪ್ರಾಣಿಯ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಒಂದೇ ದಿನದಲ್ಲಿ 16 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ.
ಪ್ರಪಂಚದ ಅಚ್ಚರಿಗಳ ತಾಣವಾಗಿರುವ ದುಬೈನಲ್ಲಿ ಈಗ ಹೊಸದೊಂದು ಕುತೂಹಲ ಮೂಡಿದೆ. ದುಬೈನ ಹೊರವಲಯದ ಮರುಭೂಮಿಯ ಹಸಿರಿನ ನಡುವೆ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಒಂದೇ ದಿನದಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಜನರು ಈ ದೃಶ್ಯವನ್ನು ವೀಕ್ಷಿಸಿದ್ದು, ಈ ಪ್ರಾಣಿ ಯಾವುದು ಎಂಬ ಚರ್ಚೆ ಶುರುವಾಗಿದೆ.
ಘಟನೆಯ ಹಿನ್ನೆಲೆ:
ಆಸ್ಟ್ರೇಲಿಯಾ ಮೂಲದ, ಪ್ರಸ್ತುತ ದುಬೈ ನಿವಾಸಿಯಾಗಿರುವ ಲೂಯಿಸ್ ಸ್ಟಾರ್ಕಿ ಎಂಬ ಯುವತಿ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ದುಬೈನ ಪ್ರಸಿದ್ಧ 'ಕ್ರೆಸೆಂಟ್ ಮೂನ್ ಲೇಕ್' ಬಳಿ ಬಾರ್ಬೆಕ್ಯೂ ಪಾರ್ಟಿಗೆ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಈ ಅಪರೂಪದ ಪ್ರಾಣಿಗಳು ಕುಳಿತಿರುವುದು ಅವರ ಕಣ್ಣಿಗೆ ಬಿದ್ದಿದೆ. ಕಾರಿನಿಂದಲೇ ಇದನ್ನು ಚಿತ್ರೀಕರಿಸಿರುವ ಅವರು, 'ಇದೇನು? ದೇವರೇ, ಇದು ಮೊಲವೇ?' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹ್ಯಾರಿ ಪಾಟರ್ ಸಿನೆಮಾದ ಪ್ರಾಣಿಯಂತೆ ಬಣ್ಣನೆ
ನೋಡಲು ದೊಡ್ಡ ಗಾತ್ರದ ಮೊಲದಂತೆ ಕಂಡರೂ, ಅದರ ಕಾಲುಗಳು ಜಿಂಕೆಯಂತಿದ್ದವು. ಈ ವಿಚಿತ್ರ ರೂಪವನ್ನು ಕಂಡು ಲೂಯಿಸ್, 'ಇದು ಮೊಲ, ಜಿಂಕೆ ಮತ್ತು ನಾಯಿಯ ಮಿಶ್ರತಳಿಯಂತೆ ಕಾಣುತ್ತಿದೆ. ಬಹುಶಃ ಹ್ಯಾರಿ ಪಾಟರ್ ಸಿನೆಮಾದಲ್ಲಿ ಬರುವಂತಹ ನಿಗೂಢ ಪ್ರಾಣಿಯೇ?' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಅಸಲಿ ವಿಷಯ ಬಯಲು ಮಾಡಿದ ನೆಟ್ಟಿಗರು: ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಮತ್ತು ಪ್ರಾಣಿ ಪ್ರಿಯರು ಇದರ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. ಇದು ಯಾವುದೇ ನಿಗೂಢ ಪ್ರಾಣಿಯಲ್ಲ, ಬದಲಿಗೆ 'ಪ್ಯಾಟಗೋನಿಯನ್ ಮಾರಾ' (Patagonian Mara) ಎಂಬ ಪ್ರಾಣಿ ಎಂದು ಗುರುತಿಸಿದ್ದಾರೆ. ಏನಿದು ಪ್ಯಾಟಗೋನಿಯನ್ ಮಾರಾ? ಇದು ಮೂಲತಃ ಅರ್ಜೆಂಟೀನಾದಲ್ಲಿ ಕಂಡುಬರುವ ದಂಶಕ (Rodent) ಜಾತಿಗೆ ಸೇರಿದ ಪ್ರಾಣಿ. ಅಳಿಲು ಮತ್ತು ಇಲಿಗಳ ಜಾತಿಗೆ ಸೇರಿದರೂ, ಇವುಗಳ ಗಾತ್ರ ದೊಡ್ಡದಾಗಿರುತ್ತದೆ ಮತ್ತು ಜಿಂಕೆಯಂತಹ ಉದ್ದನೆಯ ಕಾಲುಗಳನ್ನು ಹೊಂದಿರುತ್ತವೆ.
ದುಬೈನಲ್ಲಿ ಹೇಗೆ ಬಂತು?
ಕಮೆಂಟ್ ಮಾಡಿರುವ ಬಳಕೆದಾರರೊಬ್ಬರ ಪ್ರಕಾರ, ದುಬೈನ 'ಅಲ್ ಮರ್ಮೂಮ್ ಮರುಭೂಮಿ ಸಂರಕ್ಷಣಾ ಮೀಸಲು ಪ್ರದೇಶ'ದಲ್ಲಿ ಸುಮಾರು 200ಕ್ಕೂ ಹೆಚ್ಚು ಇಂತಹ ಮಾರಾಗಳಿವೆ. ಜನರು ಇವುಗಳನ್ನು ಸಾಕುಪ್ರಾಣಿಗಳಾಗಿ ತಂದು ನಂತರ ಮರುಭೂಮಿಯಲ್ಲಿ ಬಿಟ್ಟು ಹೋಗಿರಬಹುದು ಎಂದು ನಂಬಲಾಗಿದೆ. 2020 ರಿಂದ ದುಬೈನ ಅಲ್ ಖುದ್ರಾ ಸರೋವರಗಳ ಸುತ್ತಮುತ್ತ ಇವುಗಳು ಕಾಣಿಸಿಕೊಳ್ಳುತ್ತಿವೆ. ಮೊದಲ ನೋಟಕ್ಕೆ ಭಯ ಹುಟ್ಟಿಸಿದರೂ, ಇವುಗಳು ಮನುಷ್ಯರಿಗೆ ಅಪಾಯಕಾರಿಯಲ್ಲ ಎನ್ನಲಾಗಿದೆ. ದುಬೈ ಮರುಭೂಮಿಯ ಅಚ್ಚರಿಗಳ ಪಟ್ಟಿಗೆ ಈಗ ಈ 'ಪ್ಯಾಟಗೋನಿಯನ್ ಮಾರಾ' ಕೂಡ ಸೇರ್ಪಡೆಯಾಗಿದೆ.


