ಅ.20 ಕಳೆದರೂ ಹಿಂಗಾರು ಆರಂಭವಾಗದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಅಕ್ಟೋಬರ್‌ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಹಿಂಗಾರು (ಅ.10) ಆರಂಭವಾಗಬೇಕಾಗಿತ್ತು. ಆದರೆ, ಎರಡು ವಾರ ಕಳೆದರೂ ಹಿಂಗಾರು ಆರಂಭವಾಗದಿರುವುದು ನಿರಾಶೆ ಉಂಟುಮಾಡಿದೆ.

 ಬೆಂಗಳೂರು : ಮುಂಗಾರು ಅವಧಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಅತಿವೃಷ್ಟಿಹಾಗೂ ಇನ್ನು ಕೆಲ ಭಾಗದಲ್ಲಿ ಅನಾವೃಷ್ಟಿಸಂಭವಿಸಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದೀಗ ಹಿಂಗಾರು ವಿಳಂಬವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಮುಂಗಾರು ಮಳೆ ಕೊರತೆಯಿಂದ ರಾಜ್ಯದ 100 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡಿದೆ. ಅದೇ ವೇಳೆ, ಭಾರೀ ಮಳೆಯಿಂದ ಕರಾವಳಿ ಮತ್ತು ಮಲೆನಾಡು ಭಾಗದ ಎಂಟು ಜಿಲ್ಲೆಗಳ 45 ತಾಲೂಕುಗಳಲ್ಲಿ ಬೆಳೆ ನಾಶವಾಗಿದೆ. ಹಿಂಗಾರು ಅವಧಿಯಲ್ಲಾದರೂ ಉತ್ತಮ ಬೆಳೆ ಬೆಳೆಯುವುದಕ್ಕೆ ರೈತರು ಕಾಯುತ್ತಿದ್ದಾರೆ. ಆದರೆ, ಅ.20 ಕಳೆದರೂ ಹಿಂಗಾರು ಆರಂಭವಾಗದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಅಕ್ಟೋಬರ್‌ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಹಿಂಗಾರು (ಅ.10) ಆರಂಭವಾಗಬೇಕಾಗಿತ್ತು. ಆದರೆ, ಎರಡು ವಾರ ಕಳೆದರೂ ಹಿಂಗಾರು ಆರಂಭವಾಗದಿರುವುದು ನಿರಾಶೆ ಉಂಟುಮಾಡಿದೆ.

ವಿಳಂಬಕ್ಕೂ ಮಳೆ ಹಂಚಿಕೆಗೂ ಸಂಬಂಧವಿಲ್ಲ:

ಹಿಂಗಾರು ವಿಳಂಬ ಇದೇ ಮೊದಲೇನೂ ಅಲ್ಲ. ಈ ಹಿಂದೆ ಹಲವಾರು ಬಾರಿ ಹಿಂಗಾರು ವಿಳಂಬವಾಗಿ ಆರಂಭವಾದ ಉದಾರಣೆಗಳು ಇವೆ. 1997ರಲ್ಲಿ ಅ.13ರಂದು ಹಿಂಗಾರು ಪ್ರವೇಶವಾಗಿತ್ತು. ಆಗ ಶೇ.70ರಷ್ಟುಹೆಚ್ಚಿನ ಹಿಂಗಾರು ಮಳೆಯಾಗಿತ್ತು. 2000ರಲ್ಲಿ ನ.2ರಂದು ಹಿಂಗಾರು ಪ್ರವೇಶವಾಗಿತ್ತು. ಆಗ ಶೇ.28ರಷ್ಟುಮಳೆ ಕೊರತೆ ಉಂಟಾಗಿತ್ತು. ಹಿಂಗಾರು ವಿಳಂಬವಾಗುವುದಕ್ಕೂ ಮತ್ತು ಮಳೆ ಹಂಚಿಕೆ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ. ವಿಳಂಬವಾದ ವರ್ಷದಲ್ಲಿ ಕೆಲವು ಬಾರಿ ಹೆಚ್ಚು ಮತ್ತೆ ಕೆಲವು ಬಾರಿ ಕಡಿಮೆ ಮಳೆಯಾದ ಉದಾಹರಣೆಯಿದೆ. ಆದರೆ, ಈ ವರ್ಷ ರಾಜ್ಯದಲ್ಲಿ ವಾಡಿಕೆ ಪ್ರಮಾಣದಷ್ಟುಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

24 ಗಂಟೆಗಳಲ್ಲಿ ಮುಂಗಾರು ಹಿಂದಕ್ಕೆ:

ಭಾರತೀಯ ಹವಾಮಾನ ಇಲಾಖೆ ಮುಂಗಾರು ಮತ್ತು ಹಿಂಗಾರು ಆರಂಭದ ಅಧಿಕೃತ ಘೋಷಣೆ ಮಾಡುತ್ತದೆ. ಮುಂಗಾರು ಘೋಷಣೆ ಮಾಡುವಾಗ ಕೇರಳ, ಕರ್ನಾಟಕದ ಕರಾವಳಿ ಹಾಗೂ ಲಕ್ಷದ್ವೀಪಗಳ ವಾಯುಗುಣ, ಉಷ್ಣಾಂಶವನ್ನು ಆಧರಿಸಿ ಘೋಷಣೆ ಮಾಡುತ್ತದೆ. ಹಿಂಗಾರು ಪ್ರವೇಶವನ್ನು ತಮಿಳುನಾಡು ಭಾಗದ ಪೂರ್ವ ಕರಾವಳಿಯ ಲಕ್ಷಣಗಳನ್ನು ಆಧರಿಸಿ ಘೋಷಿಸುತ್ತದೆ. ಭಾನುವಾರ ಅಥವಾ ಸೋಮವಾರ ಹಿಂಗಾರು ಪ್ರವೇಶದ ಕುರಿತು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಹಿಂಗಾರು ಘೋಷಣೆಗೆ ಬೇಕಾದ ಲಕ್ಷಣಗಳೇನು?

* ಕೇರಳ ಮತ್ತು ರಾಜ್ಯ ಭಾಗದಲ್ಲಿ ನೈಋುತ್ಯ ಮಾನ್ಸೂನ್‌ ಸಂಪೂರ್ಣ ಕೊನೆಯಾಗಬೇಕು

* ತಮಿಳುನಾಡಿನ ಕರಾವಳಿಯಲ್ಲಿ ಪೂರ್ವ ಭಾಗದಿಂದ ನೆಲಮಟ್ಟದಲ್ಲಿ ಗಾಳಿಯ ಒತ್ತಡವಿರಬೇಕು.

* ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್‌ಗೆ ಪೂರಕವಾದ ವಾತಾವರಣವಿರಬೇಕು.

* ತಮಿಳುನಾಡಿನಲ್ಲಿ ಶೇ.50ಕ್ಕಿಂತ ಹೆಚ್ಚು ಭಾಗದಲ್ಲಿ ಮಳೆಯಾಗುತ್ತಿರಬೇಕು.


* ರಾಜ್ಯದಲ್ಲಿ ಹಿಂಗಾರು ವಾಡಿಕೆ ಮಳೆ ಪ್ರಮಾಣ 188 ಮಿ.ಮೀ.

* 2017ರಲ್ಲಿ (181 ಮಿ.ಮೀ. ಶೇ.3 ಕೊರತೆ)

ಮುಂಗಾರು ಅವಧಿ ಮುಗಿಯುತ್ತಿದ್ದಂತೆ ಅ.10ರ ವೇಳೆಗೆ ಹಿಂಗಾರು ಆರಂಭವಾಗಬೇಕಾಗಿತ್ತು. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಎರಡು ಬಾರಿ ವಾಯುಭಾರ ಕುಸಿತ ಉಂಟಾಗಿತ್ತು. ವಾಯುಭಾರ ಕುಸಿತ ಸಹ ಹಿಂಗಾರು ಪ್ರವೇಶ ವಿಳಂಬಕ್ಕೆ ಒಂದು ಕಾರಣವಾಗಿದೆ.

- ಪ್ರಭು, ವಿಜ್ಞಾನಿ, ಕೆಎಸ್‌ಎನ್‌ಡಿಎಂಸಿ

ವರದಿ : ವಿಶ್ವನಾಥ ಮಲೇಬೆನ್ನೂರು