ನಾಳೆಯಿಂದಲೇ ಖಾಸಗಿ-ಸರ್ಕಾರಿ ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ದಿಢೀರ್ ಈ ನಿರ್ಧಾರ ಯಾಕೆ?
ನವದೆಹಲಿ (ಡಿ.17) ಉದ್ಯೋಗಿಗಳಿಗೆ ಮನೆಯಿಂದ ಕೆಲಸದ ಅವಕಾಶ ಬಹುತೇಕ ಕಂಪನಿಗಳು ನಿಲ್ಲಿಸಿದೆ. ಇತ್ತೀಚೆಗೆ ಎಲ್ಲರೂ ಕಚೇರಿಯಂದಲೇ ಕೆಲಸ ಮಾಡಬೇಕು ಎಂದು ಐಟಿ ಸೇರಿದಂತೆ ಹಲವು ಕ್ಷೇತ್ರಗಳು ಕಡ್ಡಾಯ ನಿಮಯ ತಂದಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಇದರ ನಡುವೆ ಸರ್ಕಾರ ಮಹತ್ವದ ಆದೇಶ ನೀಡಿದೆ. ನಾಳೆಯಿಂದಲೇ (ಡಿ.18) ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಶೇಕಡಾ 50 ರಷ್ಟು ಉದ್ಯೋಗಿಗಳೆ ವರ್ಕ್ ಫ್ರಮ್ ಹೋಮ್ (ಮನೆಯಿಂದ ಕೆಲಸ) ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಹೌದು, ಈ ಆದೇಶ ಹೊರಡಿಸಿರುವುದು ದೆಹಲಿ ಸರ್ಕಾರ.
ಕೈಮೀರಿದ ಪರಿಸ್ಥಿತಿಯಲ್ಲಿ ನಿರ್ಧಾರ ಅನಿವಾರ್ಯ ಎಂದ ಸರ್ಕಾರ
ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿದೆ. ಹಲವು ಕ್ರಮಗಳನ್ನು ಕೈಗೊಂಡರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಿಗುತಿಲ್ಲ. ಒಂದೆಡೆ ವಾಹನಗಳ ದಟ್ಟಣೆ, ಕಾರ್ಖಾನೆಗಳು, ಕಾಮಗಾರಿ ಸೇರಿದಂತೆ ಎಲ್ಲವೂ ದೆಹಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಡಿಸೆಂಬರ್ 18 ರಿಂದ ದೆಹಲಿಯಲ್ಲಿ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು ತಮ್ಮ ಉದ್ಯೋಗಿಗಳ ಶೇಕಡಾ 50 ರಷ್ಟು ಮಂದಿಗೆ ಕಡ್ಡಾಯವಾಗಿ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆದೇಶ ಹೊರಡಿಸಿದೆ. ಈ ನಿಯಮ ಪಾಲಿಸದಿದ್ದರೆ ದುಬಾರಿ ದಂಡ ವಿಧಿಸಲಾಗುತ್ತದೆ ಎಂದಿದೆ.
ತುರ್ತ ಸೇವಾ ವಿಭಾಗಕ್ಕೆ ವಿನಾಯಿತಿ
ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀತಿ ನಾಳೆಯಿಂದ ದೆಹಲಿಯಲ್ಲಿ ಜಾರಿಗೆ ಬರುತ್ತಿದೆ. ಇದರಲ್ಲಿ ತುರ್ತು ಸೇವಾ ವಿಭಾಗಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆ ಸೇರಿದಂತೆ ಇತರ ಸೇವೆಗಳು ಈ ನಿಯಮಕ್ಕೆ ಒಳಪಡುವುದಿಲ್ಲ ಎಂದಿದೆ. ಐಟಿ ಸೇರಿದಂತೆ ಇತರ ಕಂಪನಿಗಳು ಈ ನಿಯಮ ಪಾಲಿಸಬೇಕು ಎಂದಿದೆ. ಈ ಮೂಲಕ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಿ ವಾಯು ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ ಪ್ಲಾನ್ ಮಾಡಿದೆ. ವಾಹನಗಳ ಸಂಚಾರದಿಂದ ಹೊರಬರುವ ಕಾರ್ಬನ್ ಡೈಆಕ್ಸೈಡ್ ಪರಿಸರ ಮಾಲಿನ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ಮೂಲಕ ಈ ಮಾಲಿನ್ಯ ತಗ್ಗಿಸಲು ಪ್ಲಾನ್ ಮಾಡಲಾಗಿದೆ.
ಕೆಲಸ ಇಲ್ಲದ ಕಾರ್ಮಿಕರಿಗೆ 10,000 ರೂಪಾಯಿ ಸಹಾಯಧನ
ಡಿಸೆಂಬರ್ ಆರಂಭದಿಂದಲೇ ದೆಹಲಿಯಲ್ಲಿ GRAP 3 ನಿರ್ಬಂಧಗಳು ಜಾರಿ ಮಾಡಲಾಗಿದೆ. ಇದರಿಂದ ಕಟ್ಟಡ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಲವರು ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ GRAP 3 ಕಾರಣದದಿಂದ ಕೆಲಸ ಕಳೆದುಕೊಂಡ, ಹಾಗೂ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಕಾರ್ಮಿಕರಿಗೆ ಸರ್ಕಾರ 10,000 ರೂಪಾಯಿ ಸಹಾಯಧನ ನೀಡುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ.
ಡಿ.18 ರಿಂದ ಇಂಧನಕ್ಕೆ ಬೇಕು ಪಿಯುಸಿ ಸರ್ಟಿಫಿಕೇಟ್
ಡಿಸೆಂಬರ್ 18 ರಿಂದ ದೆಹಲಿಯಲ್ಲಿ ನಿಯಮಗಳು ಬಿಗಿಯಾಗುತ್ತಿದೆ. ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಭರ್ತಿ ಮಾಡಲು ಪಿಯುಸಿ (ಪರಿಸರ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ) ಕಡ್ಡಾಯವಾಗಿದೆ. ಅದಿಕೃತ ದಾಖಲೆ ಇದ್ದರೆ ಮಾತ್ರ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದೊರೆಯಲಿದೆ. ಎಮಿಶನ್ ಟೆಸ್ಟ್ ವೇಳೆ ನಿಮ್ಮ ವಾಹನದಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣಗಳನ್ನು ನಮೂದಿಸುತ್ತಾರೆ. ಇದು ನಿಗದಿತ ಅಂಶಕ್ಕಿಂತ ಹೆಚ್ಚಿರಬಾರದು. ಹೀಗಿದ್ದರೆ ನಾಳೆಯಿಂದ ದೆಹಲಿಯಲ್ಲಿ ಇಂಧನ ಸಿಗುವುದಿಲ್ಲ. ದೆಹಲಿ ಹೊರಗಿನ ವಾಹನಗಳು ದೆಹಲಿ ಪ್ರವೇಶಿಲಲು ಬಿಎಸ್6 ಎಮಿಶನ್ ಎಂಜಿನ್ ಆಗಿರಬೇಕು, ಇದಕ್ಕಿಂತ ಹಿಂದಿನ ವರ್ಶನ್ ಎಮಿಶನ್ ಎಂಜಿನ್ ವಾಹನಗಳಿಗೆ ದೆಹಲಿ ಪ್ರವೇಶವಿಲ್ಲ.


