ಹತ್ತು ದಿನಗಳ ಹಿಂದಷ್ಟೇ ರಾಜ್ಯ ಸಚಿವ ಸಂಪುಟ ರಚಿಸಿದ್ದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇನ್ನು ಎರಡು ವಾರಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ.

ನವದೆಹಲಿ :  ಹತ್ತು ದಿನಗಳ ಹಿಂದಷ್ಟೇ ರಾಜ್ಯ ಸಚಿವ ಸಂಪುಟ ರಚಿಸಿದ್ದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇನ್ನು ಎರಡು ವಾರಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾನುವಾರದ ನೀತಿ ಆಯೋಗ ಸಭೆಗಾಗಿ ದೆಹಲಿಗೆ ಆಗಮಿಸಿದ್ದ ಅವರು ಶನಿವಾರ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದರು. ಇನ್ನು 15 ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಲಿದ್ದು ಕಾಂಗ್ರೆಸ್‌ನಿಂದ ನಾಲ್ವರು ಸಂಪುಟ ಸೇರಲಿದ್ದಾರೆ. ಜೆಡಿಎಸ್‌ ಪಾಲಿನ ಒಂದು ಸೀಟನ್ನು ಮಾತ್ರ ಹಾಗೇ ಖಾಲಿ ಉಳಿಸಿಕೊಳ್ಳಲಿದೆ’ ಎಂದರು. 

ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ವೇಳೆ ಕಾಂಗ್ರೆಸ್‌ ತನ್ನ ಕೋಟಾದ 6 ಹಾಗೂ ಜೆಡಿಎಸ್‌ 1 ಸ್ಥಾನ ಬಾಕಿ ಉಳಿಸಿಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.

ಮೇ 23ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಕುಮಾರಸ್ವಾಮಿ ಅವರು ಬಳಿಕ ಹೆಚ್ಚೂ ಕಡಿಮೆ 2 ವಾರಗಳ ಬಳಿಕ 27 ಮಂದಿಯ ಸಚಿವ ಸಂಪುಟ ರಚಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ನಿಗದಿಯಾಗಿದ್ದ ಕೋಟಾದಲ್ಲಿ ಆರು ಸ್ಥಾನ ಮತ್ತು ಜೆಡಿಎಸ್‌ಗೆ ನಿಗದಿಯಾಗಿದ್ದ ಕೋಟಾಗಳಲ್ಲಿ ಒಂದು ಸ್ಥಾನಗಳನ್ನು ಬಾಕಿ ಉಳಿಸಿಕೊಂಡಿದ್ದರು. ಇದೀಗ ಸಚಿವ ಸ್ಥಾನ ವಂಚಿತರ ಅಸಮಾಧಾನದ ಮುಂದುವರಿದಿರುವಂತೆಯೇ ಕಾಂಗ್ರೆಸ್‌ ಪಾಲಿನ ಆರು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಭರ್ತಿಯಾಗಲಿವೆ.