ರಾಜ್ಯದಲ್ಲಿ ಸದ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅನೇಕರು ಬಿಜೆಪಿ ಸಂಪರ್ಕದಲ್ಲಿ ಇದ್ದು  ಇದು ಬಿಜೆಪಿ ಅಧಿಕಾರಕ್ಕೆಬರಲು ನೆರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ವಿಜಯಪುರ/ಕಲಬುರಗಿ : ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅನೇಕ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಬಿಜೆಪಿಗೆ ಅಧಿಕಾರ ಹಿಡಿಯಲು ನೆರವಾಗಲಿದೆ. ಶೀಘ್ರ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳಿವೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ ಸರ್ಕಾರ ಸತ್ತಿದೆ. ಉತ್ತರ ಕರ್ನಾಟಕ ಭಾಗದ ಜನ ಸತ್ತಿದ್ದಾರೆಯೋ ಬದುಕಿದ್ದಾರೆಯೋ ಎಂದು ಬಂದು ನೋಡುವವರಿಲ್ಲ. ನೂರು ದಿನ ಪೂರೈಸಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿಲ್ಲ. ನೀರಾವರಿ, ಲೋಕೋಪಯೋಗಿ ಇಲಾಖೆಗಳಲ್ಲಿ ಕೆಲಸ ಆಗುತ್ತಿಲ್ಲ ಎಂದರು.

ಕಮಿಷನ್‌ ಏಜೆಂಟ್‌ ರೀತಿ ಕೆಲಸ: ರಾಜ್ಯದಲ್ಲಿರುವ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಕಮಿಷನ್‌ ಏಜೆಂಟ್‌ ರೀತಿ ಕೆಲಸ ಮಾಡುತ್ತಿದೆ. ಬಹಳ ಕಷ್ಟಪಟ್ಟು ಸಮನ್ವಯ ಸಮಿತಿ ಸಭೆ ಸೇರಿದ್ದಾರೆ. ನೀರಾವರಿ ಯೋಜನೆಗಳು ಪಿಡಬ್ಲ್ಯೂಡಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸುಮಾರು 10 ಸಾವಿರ ಕೋಟಿ ರುಪಾಯಿ ಗುತ್ತಿಗೆದಾರರಿಗೆ ಪೇಮೆಂಟ್‌ ಮಾಡದೇ ಅಭಿವೃದ್ಧಿ ಕಾರ್ಯ ನಿಂತಿವೆ. ಹಿಂದೆ ಗುತ್ತಿಗೆದಾರರು ಕಮಿಷನ್‌ ಕೊಟ್ಟು ಕಾಮಗಾರಿ ತೆಗೆದುಕೊಂಡರು. ಈಗ ಮತ್ತೊಮ್ಮೆ ಕಮಿಷನ್‌ ಕೊಡಬೇಕು ಎಂದು ನೀರಾವರಿ ಸಚಿವರು, ಪಿಡಬ್ಲ್ಯೂಡಿ ಸಚಿವರು ಹೇಳುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ ಎಂದು ದೂರಿದರು.

ಯಾವ ಕಾರಣಕ್ಕೆ ಟೆಂಪಲ್‌ ರನ್‌: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟೆಂಪಲ್‌ ರನ್‌ ಮಾಡುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಅವರನ್ನೇ ಕೇಳಬೇಕು. ನಾನು ಮುಖ್ಯಮಂತ್ರಿ ಇದ್ದಾಗ ಗುಡಿ, ಮಠಗಳಿಗೆ ಓಡಾಡಿದ್ದೇನೆ. ಮಠಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದರು.ರಾಹುಲ್‌ ಗಾಂಧಿ ವಿಮಾನ ಘಟನೆ ವಿಚಾರವನ್ನು ಕೇಂದ್ರ ಮುಚ್ಚುವ ಪ್ರಶ್ನೆಯೇ ಇಲ್ಲ. ಸಮಗ್ರ ತನಿಖೆ ನಡೆಯುತ್ತಿದೆ. ರಾಹುಲ್‌ ಗಾಂಧಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಹೇಳಿದರು.

ಎಂಪಿ ಟಿಕೆಟ್‌ಗೆ ಬಿಎಸ್‌ವೈ ಸಮ್ಮುಖದಲ್ಲಿ ವಾಗ್ವಾದ: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿಯೇ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್‌ ರಾಠೋಡ್‌ ಬೆಂಬಲಿಗರು ಹಾಗೂ ಮಾಜಿ ಸಚಿವ ಬಾಬುರಾವ್‌ ಚವ್ಹಾಣ್‌ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ.

ಶನಿವಾರ ಐವಾನ್‌ ಎ ಶಾಹಿ ಅತಿಥಿ ಗೃಹದಲ್ಲಿ ಜಿಲ್ಲಾ ನಾಯಕರ ಜೊತೆ ಬಿಎಸ್‌ವೈ ಸಭೆ ನಡೆಸಿದರು. ಈ ವೇಳೆ ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಅನ್ನು ಸುಭಾಷ್‌ ರಾಠೋಡ್‌ಗೆ ನೀಡುವಂತೆ ಮನವಿ ನೀಡಲಾಗಿದೆ. ಈ ಹಂತದಲ್ಲಿ ಅಲ್ಲೇ ನಿಂತಿದ್ದ ಮಾಜಿ ಸಚಿವ ಬಾಬೂರಾವ್‌ ಚವ್ಹಾಣ್‌ ತಾವು ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ ಎಂದರು. ಹೀಗಾಗಿ ಈ ಹಂತದಲ್ಲಿ ಇಬ್ಬರ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಆಗ ಯಡಿಯೂರಪ್ಪನವರೇ ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿ ಅಹವಾಲು ಆಲಿಸಿದರು.