ಬೆಂಗಳೂರು [ಆ.16]:  ಕೇಂದ್ರ ಸರ್ಕಾರದ ಬೃಹತ್‌ ಕೈಗಾರಿಕೆಗಳ ಸಚಿವಾಲಯವು ‘ಫೇಮ್‌’ ಯೋಜನೆಯ ಎರಡನೇ ಹಂತದಲ್ಲಿ ಕೆಎಸ್‌ಆರ್‌ಟಿಸಿಗೆ 50 ಎಲೆಕ್ಟ್ರಿಕ್‌ ಬಸ್‌ಗೆ ಸಹಾಯಧನ ನೀಡಲು ಒಪ್ಪಿಗೆ ನೀಡಿದೆ. ಈ ಮೂಲಕ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ಇತರ ಪ್ರಮುಖ ನಗರಗಳ ನಡುವೆ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ ನಡೆಸುವ ಕೆಎಸ್‌ಆರ್‌ಟಿಸಿ ಕನಸಿಗೆ ಜೀವ ಬಂದಿದೆ.

ಕೆಎಸ್‌ಆರ್‌ಟಿಸಿಯು ಕಳೆದ ವರ್ಷವೇ ಬೆಂಗಳೂರು ನಗರದಿಂದ ಇನ್ನೂರು ಕಿ.ಮೀ. ವ್ಯಾಪ್ತಿಯ ಮೈಸೂರು, ತುಮಕೂರು, ಕೋಲಾರ, ಹಾಸನ ಸೇರಿದಂತೆ ಕೆಲ ನಗರಗಳ ನಡುವೆ ಎಲೆಕ್ಟ್ರಿಕ್‌ ಬಸ್‌ ಕಾರ್ಯಾಚರಣೆ ಆರಂಭಿಸಲು ಯೋಜನೆ ರೂಪಿಸಿತ್ತು. ಆದರೆ, ಫೇಮ್‌ ಯೋಜನೆಯ ಒಂದನೇ ಹಂತದಲ್ಲಿ ಕೇವಲ ನಗರ ಸಾರಿಗೆಗೆ ಮಾತ್ರ ಸಹಾಯ ಧನ ನೀಡಲು ಅವಕಾಶ ಇದ್ದಿದ್ದರಿಂದ ಯೋಜನೆಯನ್ನು ಕೈ ಬಿಟ್ಟಿತ್ತು. ಈಗ ಫೇಮ್‌ ಯೋಜನೆಯ ಎರಡನೇ ಹಂತದಲ್ಲಿ ನಗರ ಸಾರಿಗೆ ಜತೆಗೆ ಅಂತರ್‌ ನಗರ ಸಾರಿಗೆ ಸೇವೆಗೂ ಸಹಾಯಧನ ನೀಡಲು ನಿರ್ಧರಿಸಿರುವುದರಿಂದ ಕೆಎಸ್‌ಆರ್‌ಟಿಸಿಯ ಎಲೆಕ್ಟ್ರಿಕ್‌ ಬಸ್‌ ಕನಸು ಸಾಕಾರಗೊಳ್ಳುವ ಕಾಲ ಕೂಡಿ ಬಂದಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವರ್ಷವೇ 50 ಎಲೆಕ್ಟ್ರಿಕ್‌ ಬಸ್‌ಗಳಿಗೆ ಫೇಮ್‌ ಯೋಜನೆಯಡಿ ಸಹಾಯಧನ ಕೋರಿ ಕೇಂದ್ರದ ಬೃಹತ್‌ ಕೈಗಾರಿಕಾ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಆ ಪ್ರಸ್ತಾವನೆಯನ್ನೇ ಪರಿಗಣಿಸಿ ಒಪ್ಪಿಗೆ ನೀಡಿರುವುದರಿಂದ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿಲ್ಲ. ಗುತ್ತಿಗೆ ಮಾದರಿಗೆ ಮಾತ್ರ ಸಹಾಯಧನ ನೀಡಲು ನಿರ್ಧರಿಸಿರುವುದರಿಂದ ಗುತ್ತಿಗೆ ಮಾದರಿಯಲ್ಲೇ ಎಲೆಕ್ಟ್ರಿಕ್‌ ಬಸ್‌ ಪಡೆದು ಕಾರ್ಯಾಚರಣೆ ಮಾಡಬೇಕಿದೆ. ಈ ಸಂಬಂಧ ಸದ್ಯದಲ್ಲೇ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಅವರು ಹೇಳಿದರು.

ನಗರಕ್ಕೆ ಬರಲಿವೆ ನೂತನ ಬಸ್‌ಗಳು!

ಡೀಸೆಲ್‌ ಬಸ್‌ಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್‌ ಬಸ್‌ ದರ ದುಬಾರಿ. ಆದರೆ, ಈ ಬಸ್‌ಗಳು ಪರಿಸರ ಸ್ನೇಹಿಯಾಗಿರುತ್ತವೆ. ಗುತ್ತಿಗೆ ಮಾದರಿಯಲ್ಲಿ ಬಸ್‌ ಪಡೆಯುವುದರಿಂದ ನಿರ್ವಹಣೆಯ ತಲೆಬಿಸಿ ಇರುವುದಿಲ್ಲ. ಫೇಮ್‌ ಯೋಜನೆಯಡಿ ಪ್ರತಿ ಬಸ್‌ಗೆ ಸುಮಾರು 1 ಕೋಟಿ ರು. ಸಹಾಯಧನ ಸಿಗುವ ನಿರೀಕ್ಷೆಯಿದೆ. ಇನ್ನು ಸರ್ಕಾರ ರಿಯಾಯತಿ ದರದಲ್ಲಿ ವಿದ್ಯುತ್‌ ನೀಡಿದರೆ ನಿಗಮಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಈ ಸಂಬಂಧ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.