ಮೋಹನ ಹಂಡ್ರಂಗಿ

ಬೆಂಗಳೂರು [ಆ.13]:  ರಾಜಧಾನಿ ಬೆಂಗಳೂರಿನಲ್ಲಿ ಬಹುದಿನಗಳ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸು ನನಸಾಗುವ ಕಾಲ ಹತ್ತಿರವಾಗಿದೆ. ಏಕೆಂದರೆ, ಕೇಂದ್ರದ ಬೃಹತ್‌ ಕೈಗಾರಿಕೆಗಳ ಸಚಿವಾಲಯವು ಬಿಎಂಟಿಸಿ ಗುತ್ತಿಗೆ ಮಾದರಿಯಡಿ ಪಡೆಯುವ 300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಹಾಯಧನ ನೀಡಲು ಒಪ್ಪಿಗೆ ಸೂಚಿಸಿದೆ.

ಬಿಎಂಟಿಸಿಯು ಕಳೆದ ಜುಲೈನಲ್ಲಿ ಎಲೆಕ್ಟ್ರಿಕ್‌ ಬಸ್‌ಗೆ ಸಹಾಯಧನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆ ಪುರಸ್ಕರಿಸಿರುವ ಕೇಂದ್ರ ಸರ್ಕಾರವು ‘ಫಾಸ್ಟರ್‌ ಅಡಾಷ್ಪನ್‌ ಆ್ಯಂಡ್‌ ಮ್ಯಾನುಫ್ಯಾಕ್ಚರ್‌ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್‌’(ಫೇಮ್‌) ಯೋಜನೆಯ ಎರಡನೇ ಹಂತದಲ್ಲಿ 300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಹಾಯಧನ ನೀಡಲು ಒಪ್ಪಿಗೆ ಸೂಚಿಸಿದೆ. ಇದರಿಂದ ಬಿಎಂಟಿಸಿಯ ಎಲೆಕ್ಟ್ರಿಕ್‌ ಬಸ್‌ ಕನಸಿಗೆ ಮುನ್ನಡೆಯಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಫೆಬ್ರವರಿಯಲ್ಲಿ ನಡೆದ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಐದು ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ 1500 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ನಿರ್ಧರಿಸಲಾಗಿತ್ತು. ಬಸ್‌ ಖರೀದಿಗೆ ಫೇಮ್‌ ಯೋಜನೆಯಡಿ ಸಹಾಯಧನ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಕೇಂದ್ರದ ಬೃಹತ್‌ ಕೈಗಾರಿಕೆಗಳ ಸಚಿವಾಲಯವು ಫೇಮ್‌ ಎರಡನೇ ಹಂತದಲ್ಲಿ ಗುತ್ತಿಗೆ ಮಾದರಿ ಬಸ್‌ಗಳಿಗೆ ಮಾತ್ರ ಸಹಾಯಧನ ನೀಡುವ ನಿಯಮ ಮಾಡಿದೆ. ಪ್ರತಿ ಬಸ್‌ಗೆ ಸುಮಾರು 1 ಕೋಟಿ ರು. ಸಹಾಯಧನ ಸಿಗುವುದರಿಂದ ನಿಯಮಾನುಸಾರ ಗುತ್ತಿಗೆ ಮಾದರಿಯಲ್ಲೇ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಬಿಎಂಟಿಸಿ ತೀರ್ಮಾನಿಸಿದೆ ಎಂದರು.

ಮತ್ತೆ ಹಿಂದಕ್ಕೆ!:

ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿಯು ಗುತ್ತಿಗೆ ಆಧಾರದಡಿ 80 ಎಲೆಕ್ಟ್ರಿಕ್‌ ಬಸ್‌ ಪಡೆಯಲು ಟೆಂಡರ್‌ ಕರೆದ್ದಿತ್ತು. ಈ ಟೆಂಡರ್‌ನಲ್ಲಿ ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಬಿಡ್‌ ಪಡೆದಿತ್ತು. ಇನ್ನೇನು ಬಸ್‌ಗಳ ಪೂರೈಕೆಗೆ ಅಂತಿಮ ಆದೇಶ ನೀಡುವ ಹಂತದಲ್ಲಿ ಸರ್ಕಾರ ಬದಲಾಯಿತು. ಹೊಸ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಈ ಗುತ್ತಿಗೆ ಮಾದರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಟೆಂಡರ್‌ ರದ್ದುಗೊಳಿಸಿದ್ದರು. ಬಳಿಕ ನಿಗಮದಿಂದಲೇ ಎಲೆಕ್ಟ್ರಿಕ್‌ ಬಸ್‌ ಖರೀದಿಸುವುದಾಗಿ ಘೋಷಿಸಿದ್ದರು. ಈಗಿನ ಫೇಮ್‌ ಅನುದಾನ ನಿಯಮಾವಳಿ ಪ್ರಕಾರ ಗುತ್ತಿಗೆ ಮಾದರಿಗೆ ಮಾತ್ರ ಸಹಾಯಧನ ಸಿಗುವುದರಿಂದ ಬಿಎಂಟಿಸಿ ಖರೀದಿ ಪ್ರಸ್ತಾಪ ಕೈ ಬಿಟ್ಟು ಮತ್ತೆ ಹಿಂದಿನ ಗುತ್ತಿಗೆ ಮಾದರಿಗೆ ಹೊರಳುವುದು ಅನಿವಾರ್ಯವಾಗಿದೆ.

ಗುತ್ತಿಗೆ ಮಾದರಿಗೆ ಟೆಂಡರ್‌:

ಎಲೆಕ್ಟ್ರಿಕ್‌ ಬಸ್‌ ಖರೀದಿ ಸಂಬಂಧ ಬಿಎಂಟಿಸಿ ಕಳೆದ ಮಾಚ್‌ರ್‍ನಲ್ಲಿ ಎಲೆಕ್ಟ್ರಿಕ್‌ ಬಸ್‌ ಹಾಗೂ ಚಾರ್ಜಿಂಗ್‌ ಘಟಕಗಳ ಬಗ್ಗೆ ಮಾಹಿತಿ ನೀಡಲು ಆಸಕ್ತ ಕಂಪನಿಗಳಿಗೆ ಆಹ್ವಾನ ನೀಡಿತ್ತು. ಅದರಂತೆ ಒಲೆಕ್ಟ್ರಾ ಗ್ರೀನ್‌ ಟೆಕ್‌, ಅಶೋಕ ಲೇಲ್ಯಾಂಡ್‌, ಟಾಟಾ ಮೋಟ​ರ್ಸ್, ಇಡಿಸೆನ್‌ ಮೋಟಾ​ರ್ಸ್, ಜಿಬಿಎಂ ಗ್ರೂಪ್‌ ಹಾಗೂ ಎಎಂಐ ಎಲೆಕ್ಟ್ರಿಕ್‌ ಲಿಮಿಟೆಡ್‌ ಕಂಪನಿಗಳು ಎಲೆಕ್ಟ್ರಿಕ್‌ ಬಸ್‌ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ವಿಸ್ತೃತ ಮಾಹಿತಿ ನೀಡಿದ್ದವು. ಇದೀಗ ಗುತ್ತಿಗೆ ಮಾದರಿ ಅಂತಿಮವಾಗಿರುವುದರಿಂದ ಖರೀದಿ ಬದಲು ಗುತ್ತಿಗೆ ಮಾದರಿಗೆ ಟೆಂಡರ್‌ ಕರೆಯಬೇಕಿದೆ. ಈ ಸಂಬಂಧ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

 ‘ರಿಯಾಯಿತಿಯಲ್ಲಿ ವಿದ್ಯುತ್‌ ನೀಡಿ’

ಎಲೆಕ್ಟ್ರಿಕ್‌ ಬಸ್‌ಗಳ ದರ ಸುಮಾರು ಒಂದೂವರೆ ಕೋಟಿ ರುಪಾಯಿಗೂ ಅಧಿಕವಿದೆ. ಸದ್ಯ ನಿಗಮದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಬಸ್‌ಗಳ ಖರೀದಿ ಕಷ್ಟಸಾಧ್ಯ. ಈಗ ಫೇಮ್‌ ಯೋಜನೆಯಡಿ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ ಸುಮಾರು ಒಂದು ಕೋಟಿ ರು. ಸಹಾಯಧನ ಸಿಗಲಿದೆ. ಇದರ ಜತೆಗೆ ರಾಜ್ಯ ಸರ್ಕಾರದ ಬಳಿ ಅನುದಾನದ ಜತೆಗೆ ಚಾರ್ಜಿಂಗ್‌ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಕೆಗೆ ಮನವಿ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ.