ಬೆಂಗಳೂರು : ಇನ್ನು ಆರೆಂಟು ತಿಂಗಳಲ್ಲಿ ಮೈತ್ರಿ ಸರ್ಕಾರದ ಸಂಪುಟ ಪುನಾರಚನೆಯಾಗಲಿದೆ. ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ಮತ್ತು ಪ್ರಾತಿನಿಧ್ಯದ ಆಧಾರದಲ್ಲಿ ಅವಕಾಶ ವಂಚಿತರಿಗೆ ಸಚಿವ ಸಂಪುಟದಲ್ಲಿ ಆಗ ಅವಕಾಶ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಶನಿವಾರ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮತ್ತು ಅಧಿಕಾರಿಗಳೊಂದಿಗೆ ತಮ್ಮ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಅಸಮಾಧಾನಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇನ್ನೊಂದು ಆರೆಂಟು ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಪುನಾರಚನೆ ಆಗಲೇ ಆಗುತ್ತದೆ. ಆಗ ಪಕ್ಷದ ಹಿರಿಯ ಶಾಸಕರೂ ಸೇರಿದಂತೆ ಯಾರಾರ‍ಯರಿಗೆ ಈ ಬಾರಿ ಅವಕಾಶ ಸಿಕ್ಕಿಲ್ಲ ಅವರೆಲ್ಲರಿಗೂ ಸಚಿವ ಸ್ಥಾನ ದೊರೆಯಲಿದೆ. ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ಮತ್ತು ಪ್ರಾತಿನಿಧ್ಯದ ಆಧಾರದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ಪುನಾರಚನೆಯ ತೀರ್ಮಾನ ಮಾಡುತ್ತೇವೆ ಎಂದರು.

ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಬಗ್ಗೆ ಪ್ರತಿಕ್ರಿಯಿಸಿ, ವೈಯಕ್ತಿಕ ಕಾರಣದಿಂದಾಗಿ ನಾನು ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ, ಆದ್ರೆ ಸಂಪುಟ ವಿಸ್ತರಣೆಯ ಹಿಂದಿನ ದಿನ ಪಕ್ಷೇತರ ಶಾಸಕ ಆರ್‌.ಶಂಕರ್‌ ಜೊತೆ ಕೂತು ಅವರ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಪ್ರಕ್ರಿಯೆ ಬಗ್ಗೆ ಎಲ್ಲಾ ಮಾತನಾಡಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂಬುದು ಸುದ್ಧ ಸುಳ್ಳು. ಈ ಸಂಬಂಧ ಇದುವರೆಗೂ ಯಾರಿಗೂ ಪತ್ರ ಬರೆದಿಲ್ಲ. ಇಂತಹ ಸುದ್ದಿ ಎಲ್ಲಿಂದ ಬರುತ್ತೋ, ಯಾರು ಸೃಷ್ಟಿಮಾಡಿದ್ದಾರೋ ನಂಗಂತೂ ಗೊತ್ತಿಲ್ಲ. ಪಕ್ಷ ಕೊಟ್ಟಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ. ನನ್ನನ್ನು ಮುಂದುವರಿಸೋದು ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ