ಚೌಧರಿ ಎಡವಟ್ಟು, ಶಾ ಏಟು: ಸೋನಿಯಾ ಬೈದರು ದಿಕ್ಕೆಟ್ಟು!
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು| ಕಾಂಗ್ರೆಸ್’ನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೇಂದ್ರದ ನಿರ್ಧಾರ| ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಎಡವಟ್ಟು| ಜಮ್ಮು ಮತ್ತು ಕಾಶ್ಮೀರ ಆಂತರಿಕ ವಿಚಾರ ಅಲ್ಲ ಎಂದ ಕಾಂಗ್ರೆಸ್ ಸಂಸದ| ಚೌಧರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಶಾ| ಚೌಧರಿ ಹೇಳಿಕೆಗೆ ಸಿಟ್ಟಾದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ|
ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ನಿಜಕ್ಕೂ ಕಾಂಗ್ರೆಸ್’ನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾಡಿದ ಎಡವಟ್ಟು ಕಾಂಗ್ರೆಸ್’ನ ಪ್ರಸಕ್ತ ಸ್ಥಿತಿಯನ್ನು ವಿವರಿಸುತ್ತದೆ.
ಲೋಕಸಭೆಯಲ್ಲಿ ಕಾಶ್ಮೀರ ಮಸೂದೆ ವಿರೋಧಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, 1948ರಿಂದ ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿರುವುದರಿಂದ ಇದು ಆಂತರಿಕ ವಿಚಾರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರವನ್ನು ಆಂತರಿಕ ವಿಚಾರ ಅಲ್ಲ ಎನ್ನುವುದರ ಮೂಲಕ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಲ್ಲ ಎಂದು ಒಪ್ಪಿಕೊಂಡಿದೆ ಎಂದು ಹರಿಹಾಯ್ದರು.
ಇನ್ನು ಚೌಧರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೋನಿಯಾ ಗಾಂಧಿ, ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿರುವುದಕ್ಕೆ ಚೌಧರಿ ಮೇಲೆ ಹರಿಹಾಯ್ದಿದ್ದಾರೆ ಎನ್ನಲಾಗಿದೆ.