ನವದೆಹಲಿ(ಆ.06): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಂವಿಧಾನದಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದೆ. ಕೇಂದ್ರ ಗೃಹ ಸಚಿವ  ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿರುವ ಮಸೂದೆ ಕುರಿತು ಬಿಡುಸಿನ ಚರ್ಚೆ ನಡೆಯುತ್ತಿದೆ.

ಈ ಮಧ್ಯೆ ಕೇಂದ್ರದ ಈ ನಡೆ ಪ್ರತಿಪಕ್ಷ ಕಾಂಗ್ರೆಸ್’ನಲ್ಲಿ ಒಡಕನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಾಂಗ್ರೆಸ್’ನ ಕೆಲವು ನಾಯಕರು ಕೇಂದ್ರದ ನಿರ್ಧಾರದ ಪರ ಧ್ವನಿ ಎತ್ತಿದರೆ, ಮತ್ತೆ ಕೆಲವರು ಮಸೂದೆಯನ್ನು ವಿರೋಧಿಸುವ ನಿರ್ಣಯಕ್ಕೆ ಬಂದಿದ್ದಾರೆ.

ಕೇಂದ್ರದ ನಿರ್ಣಯಕ್ಕೆ ಇಡೀ ದೇಶ ಬೆಂಬಲ ನೀಡಿದ್ದು, ಎಲ್ಲರೂ ವಿಶೇಷ ಸ್ಥಾನಮಾನ ರದ್ದತಿಯನ್ನು ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಬೆಂಬಲಿಸುವುದು ಸೂಕ್ತ ಎಂದು ಕಾಂಗ್ರೆಸ್’ನ ಕೆಲವು ನಾಯಕರ ಅಭಿಪ್ರಾಯವಾಗಿದೆ.

ಮಸೂದೆ ಪರ ಧ್ವನಿ ಎತ್ತಿರುವ ಗುಂಪಿನಲ್ಲಿ ಜೈವೀರ್ ಶೇರ್’ಗಿಲ್, ಜನಾರ್ಧನ ದ್ವಿವೇದಿ, ದೀಪಿಂದರ್ ಹೂಡಾ, ಭುಭನೇಶ್ವರ್ ಕಲಿತಾ ಸೇರಿದಂತೆ ಪ್ರಮುಖರು ಸೇರಿದ್ದಾರೆ. ಕಲಿತಾ ಅವರು ಈಗಾಗಲೇ ಪಕ್ಷದ ವಿಪ್ ಉಲ್ಲಂಘಿಸಿ ಮಸೂದೆ ಪರ ಮತದಾನ ಮಾಡಿ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.

ಇನ್ನು ಮಿಲಿಂದ್ ದಿಯೋರಾ ಸೇರಿದಂತೆ ಕೆಲವು ನಾಯಕರು ತಟಸ್ಥ ನಿಲುವು ತಾಳಿದ್ದು, ಈ ಕುರಿತು ಮತ್ತಷ್ಟು ಚರ್ಚೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.   

ಆದರೆ ಮಸೂದೆಯನ್ನು ವಿರೋಧಿಸಿ ಈ ಮೂಲಕ ತನ್ನ ಸೈದ್ಧಾಂತಿಕ ನಿಲುವನ್ನು ದೇಶದ ಮುಂದಿರಿಸುವುದು ಸೂಕ್ತ ಎಂಬುದು ಕೆಲವು ಕಾಂಗ್ರೆಸ್ ನಾಯಕ ಒತ್ತಾಸೆಯಾಗಿದೆ.

ಈ ಗುಂಪಿನಲ್ಲಿ ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಸೇರಿದಂತೆ ಹಲವು ಪ್ರಮುಖ ನಾಯಕರು ಸೇರಿದ್ದಾರೆ. 370ನೇ ವಿಧಿ ಬೆಂಬಲಿಸುವುದು ಕಾಂಗ್ರೆಸ್ ಸೈದ್ಧಾಂತಿಕ ನಿಲುವಾಗಿದ್ದು, ಕಾಶ್ಮೀರದ ಜನತೆಯ ಒಳಿತಿಗಾಗಿ ಮಸೂದೆ ವಿರೋಧಿಸುವುದು ಒಳಿತು ಎಂಬ ವಾದ ಇವರದ್ದಾಗಿದೆ.

ಕಾಂಗ್ರೆಸ್’ನಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿಗೆ ಪರಿಹಾರ ಕಾಣದೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇಕ್ಕಟ್ಟಿಗೆ ಸಿಲುಕಿದ್ದು, ಮಸೂದೆ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡದೇ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.