ಬೆಂಗಳೂರು [ಜೂ.15] : ಕಡಿಮೆ ವೇತನದಿಂದ ಜೀವನ ನಿರ್ವಹಣೆ ಸಾಧ್ಯವಾಗದೆ ಬೇಸತ್ತು ಯುವ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ ಡೆತ್‌ ನೋಟ್‌ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಿರುಮಲಾ ರೆಡ್ಡಿ (27) ಮೃತ ಯುವಕ. ತಿರುಮಲಾ ರೆಡ್ಡಿ ಕೆಲ ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದ್ದ ಹಿನ್ನೆಲೆಯಲ್ಲಿ ತಿರುಮಲಾ ರೆಡ್ಡಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಅಲ್ಲದೆ, ಆಂಧ್ರದಲ್ಲಿರುವ ತನ್ನ ಕುಟುಂಬ ಸಾಕಷ್ಟುತೊಂದರೆಯಲ್ಲಿತ್ತು. ಕುಟುಂಬಕ್ಕೆ ಹಣ ಕಳುಹಿಸಲು ಆಗದೆ ತಿರುಮಲಾ ರೆಡ್ಡಿ ನೊಂದಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಡೆತ್‌ನೋಟ್‌: ತಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕಡಿಮೆ ವೇತನ ಇದೆ. ಹೀಗಾಗಿ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ತಿರುಮಲ ರೆಡ್ಡಿ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.