ನವದೆಹಲಿ(ಮಾ.27): ASAT ಕ್ಷಿಪಣಿ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಇದೀಗ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದು, ASAT ಘೋಷಣೆಯಾಗುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭರ್ಜರಿ ಚರ್ಚೆ ನಡೆಯುತ್ತಿದೆ.

ಪ್ರಧಾನಿ ಭಾಷಣದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ವಿಜ್ಞಾನಿಗಳ ಈ ಸಾಧನೆಯನ್ನು ಇಡೀ ದೇಶ ಕೊಂಡಾಡುತ್ತಿದೆ. ಈ ಮಧ್ಯೆ ಈ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂಬುದರ ಕುರಿತಾಗಿಯೂ ಚರ್ಚೆ ನಡೆಯುತ್ತಿದ್ದು, ದೇಶದ ಅಂತರಿಕ್ಷವನ್ನು ಸರುಕ್ಷಿತಗೊಳಿಸಿದ ಪ್ರಧಾನಿ ಮೋದಿ ಕುರಿತು ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ASAT ತಂತ್ರಜ್ಞಾನ ಸಂಪೂರ್ಣ ದೇಶೀಯ ತಂತ್ರಜ್ಞಾನವಾಗಿದ್ದು, ಬಾಹ್ಯಾಕಾಶದಲ್ಲಿನ ಗುಪ್ತಚರ ಉಪಗ್ರಹವನ್ನು ಹೊಡೆದುರಳಿಸುವ ಸಾಮರ್ಥ್ಯ ಹೊಂದಿದೆ. ASAT ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ DRDO ಖ್ಯಾತಿ ಉತ್ತುಂಗಕ್ಕೇರಿದೆ.

ಈ ಮಧ್ಯೆ ಇಸ್ರೋ ಮತ್ತು ಕೇಂದ್ರ ಸರ್ಕಾರಕ್ಕೆ ಶುಭಾಶಯ ಕೋರಿರುವ ಕಾಂಗ್ರೆಸ್, 1961 ರಲ್ಲಿ ಪಂಡಿತ್ ಜವಾಹರ್‌ಲಾಲ್ ನೆಹರೂ ಆರಂಭಿಸಿದ್ದ ಅಂತರಿಕ್ಷ ಯೋಜನೆಗಳು ಫಲ ನೀಡತೊಡಗಿವೆ ಎಂದು ಟ್ವೀಟ್ ಮಾಡಿದೆ.

ಅಲ್ಲದೇ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ ಇಸ್ರೋ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು ಎಂದೂ ಕಾಂಗ್ರೆಸ್ ಹೇಳಿಕೊಂಡಿದೆ.