ನವದೆಹಲಿ[ಜೂ.18]: ಸೋಮವಾರ ಲೋಕಸಭೆಯ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಚ್ಚು ಗಮನ ಸೆಳೆದಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ.

ಉತ್ತರ ಪ್ರದೇಶದ ಅಮೇಠಿಯಲ್ಲಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು 55000 ಮತಗಳ ಅಂತರದಿಂದ ಸೋಲಿಸಿ ಸ್ಮೃತಿ ಲೋಕಸಭೆಗೆ ಅಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನಕ್ಕೆ ಸ್ಮೃತಿ ಹೆಸರು ಕರೆಯುತ್ತಲೇ ಮತ್ತು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಜೆಪಿ ಸೇರಿದಂತೆ 350ರ ಆಸುಪಾಸಿನ ಸಂಖ್ಯೆಯಲ್ಲಿದ್ದ ಎನ್‌ಡಿಎ ಸದಸ್ಯರು ಸುದೀರ್ಘ ಅವಧಿಗೆ ಮೇಜು ಕುಟ್ಟಿ ಅಭಿನಂದಿಸಿದೆ. ಸ್ಮೃತಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ರಾಹುಲ್‌ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ.

‘ನೀವೆಷ್ಟು, ನಾವೆಷ್ಟು ಮರೆಯೋಣ: ಸದನದ ಘನತೆ ಮೆರೆಯೋಣ’!

ಪ್ರಮಾಣ ವಚನದ ವೇಳೆ ಗುರುವಿನ ಹೆಸರೇಳಿ ಪ್ರಜ್ಞಾ ಹೊಸ ವಿವಾದ

ಬಿಜೆಪಿಯ ವಿವಾದಿತ ನಾಯಕಿ ಪ್ರಜ್ಞಾಸಿಂಗ್‌ ಠಾಕೂರ್‌, ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಸ್ತಾಪಿಸಿದ ಹೆಸರೊಂದು ವಿಪಕ್ಷಗಳ ಭಾರೀ ಟೀಕೆಗೆ ಗುರಿಯಾಯಿತು. ಪ್ರಮಾಣ ವಚನ ಸ್ವೀಕಾರದ ವೇಳೆ ತಮ್ಮ ಹೆಸರು ಹೇಳುವುದಕ್ಕೂ ಮುನ್ನ, ತಮ್ಮ ಆಧ್ಯಾತ್ಮಿಕ ಗುರು ‘ಸ್ವಾಮಿ ಪೂರ್ಣ ಚೇತನಾನಂದ ಅವಧೇಶಾನಂದ ಗಿರಿ’ ಹೆಸರು ಹೇಳಿ ನಂತರ ತಮ್ಮ ಹೆಸರಾದ ‘ಸಾಧ್ವಿ ಪ್ರಜ್ಞಾಸಿಂಗ್‌ ಠಾಗೂರ್‌’ ಎಂದು ಹೇಳಿದರು.

ಇದಕ್ಕೆ ವಿಪಕ್ಷಗಳು ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರೆ, ಬಿಜೆಪಿ ಸದಸ್ಯರು ಮೇಜು ಕುಟ್ಟಿಬೆಂಬಲಿಸಿದರು. ಇದು ತಾರಕಕ್ಕೆ ಮುಟ್ಟಿದಾಗ ಪ್ರಭಾರ ಸ್ಪೀಕರ್‌ ವಿರೇಂದ್ರ ಕುಮಾರ್‌ ಮಧ್ಯಪ್ರವೇಶಿಸಿ ಚುನಾವಣಾ ಆಯೋಗದ ಪ್ರಮಾಣ ಪತ್ರದಲ್ಲಿನ ಹೆಸರನ್ನು ಮಾತ್ರ ದಾಖಲಿಸುವಂತೆ ಸೂಚಿಸಿದ್ದಾರೆ. ಇನ್ನು ಪ್ರಜ್ಞಾ ತಮ್ಮ ಪ್ರಮಾಣ ವಚನದ ಕೊನೆಗೆ ‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರು.