Personal Loan vs Credit Card: ದಿಢೀರ್ ಅಂತಾ ದುಡ್ಡಿನ ಅವಶ್ಯಕತೆ ಬಂದಾಗ ನಮ್ಮ ಮುಂದೆ ಇರೋದು ಎರಡೇ ದಾರಿ, ಒಂದು ಪರ್ಸನಲ್ ಲೋನ್, ಇನ್ನೊಂದು ಕ್ರೆಡಿಟ್ ಕಾರ್ಡ್. ಎರಡರಿಂದಲೂ ಬೇಗ ಹಣ ಸಿಗುತ್ತೆ, ಆದ್ರೆ ಇವೆರಡರ ಲೆಕ್ಕಾಚಾರಾನೇ ಬೇರೆ.
ಜೀವನದಲ್ಲಿ ಅಂದುಕೊಳ್ಳದೆ ಇರುವ ಖರ್ಚುಗಳು ದಿಢೀರ್ ಅಂತ ಬಂದಾಗ, ಹಣಕ್ಕೆ ಎಲ್ಲಿಗೆ ಹೋಗೋದು ಅಂತ ತಲೆಬಿಸಿಯಾಗುತ್ತೆ. ಆಗ ನಮಗೆ ನೆನಪಾಗೋದೇ ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್. ಎರಡರಿಂದಲೂ ಬೇಗ ಹಣ ಸಿಕ್ಕರೂ, ಇವು ಕೆಲಸ ಮಾಡುವ ರೀತಿ ಸಂಪೂರ್ಣ ಬೇರೆ. ಸರಿಯಾಗಿ ತಿಳಿದುಕೊಳ್ಳದೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿದರೆ, ನಿಮ್ಮ ಸಾಲದ ಹೊರೆ ದುಪ್ಪಟ್ಟಾಗಬಹುದು. ನೋಡೋಕೆ ಬಡ್ಡಿ ದರದಲ್ಲಿ ಮಾತ್ರ ವ್ಯತ್ಯಾಸ ಇದೆ ಅನಿಸಿದರೂ, ಬಡ್ಡಿ ಲೆಕ್ಕಾಚಾರ ಮಾಡುವ ರೀತಿ ಮತ್ತು ಮರುಪಾವತಿ ಅವಧಿಯನ್ನು ನೋಡಿದಾಗ ಇವೆರಡರ ನಡುವೆ ದೊಡ್ಡ ಅಂತರವಿದೆ.
ಕ್ರೆಡಿಟ್ ಕಾರ್ಡ್: 'ಮಿನಿಮಮ್ ಡ್ಯೂ' ಅನ್ನೋ ಡೇಂಜರ್ ಟ್ರ್ಯಾಪ್
ಸ್ವಲ್ಪ ಸಮಯದ ಅವಶ್ಯಕತೆಗಳಿಗೆ ಕ್ರೆಡಿಟ್ ಕಾರ್ಡ್‌ಗಳು ಸರಿಹೊಂದುತ್ತವೆ. ಬಿಲ್ ಮೊತ್ತವನ್ನು ಸರಿಯಾದ ಸಮಯಕ್ಕೆ ಪೂರ್ತಿಯಾಗಿ ಕಟ್ಟಿದರೆ ಬಡ್ಡಿ ಕಟ್ಟಬೇಕಾಗಿಲ್ಲ ಅನ್ನೋದೇ ಇದರ ದೊಡ್ಡ ಪ್ಲಸ್ ಪಾಯಿಂಟ್. ಆದರೆ, ನೀವು ಹಣ ಕಟ್ಟೋದು ತಪ್ಪಿದರೆ ಕಥೆನೇ ಬೇರೆ. ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಕಂಪನಿಗಳು ವರ್ಷಕ್ಕೆ 30 ರಿಂದ 45 ಪ್ರತಿಶತದವರೆಗೆ ಬಡ್ಡಿ ವಿಧಿಸುತ್ತವೆ. ಇಲ್ಲಿ ಬಡ್ಡಿಯನ್ನು ತಿಂಗಳ ಲೆಕ್ಕದಲ್ಲಿ ಹಾಕಲ್ಲ, ಪ್ರತಿದಿನದ ಲೆಕ್ಕದಲ್ಲಿ ಹಾಕ್ತಾರೆ. ನೀವು ಕಟ್ಟದೆ ಉಳಿದಿರೋ ಹಣದ ಮೇಲೆ ಚಕ್ರಬಡ್ಡಿ ಬೆಳೆಯುತ್ತಲೇ ಹೋಗುತ್ತೆ. 'ಮಿನಿಮಮ್ ಡ್ಯೂ' ಮಾತ್ರ ಕಟ್ಟುತ್ತಾ ಹೋದರೆ ಸಾಲ ತೀರುವುದಿಲ್ಲ, ಬದಲಾಗಿ ವರ್ಷಗಟ್ಟಲೆ ನಿಮ್ಮನ್ನು ಸಾಲಗಾರನನ್ನಾಗಿ ಮಾಡುತ್ತೆ. ಕಡಿಮೆ ಹಣ ಬೇಕಿದ್ದರೆ, ಮತ್ತು ಒಂದೆರಡು ತಿಂಗಳಲ್ಲಿ ವಾಪಸ್ ಕಟ್ಟಬಹುದು ಅನ್ನೋ ನಂಬಿಕೆ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸುವುದು ಬುದ್ಧಿವಂತಿಕೆ.
ಪರ್ಸನಲ್ ಲೋನ್: ಪಕ್ಕಾ ಪ್ಲಾನಿಂಗ್ ಇದ್ರೆ ಇದು ಸೇಫ್
ಒಂದು ನಿಗದಿತ ಮೊತ್ತವನ್ನು ತೆಗೆದುಕೊಂಡು, ನಿರ್ದಿಷ್ಟ ಅವಧಿಯಲ್ಲಿ ತಿಂಗಳ ಕಂತುಗಳಲ್ಲಿ (EMI) ವಾಪಸ್ ಕಟ್ಟಲು ಪರ್ಸನಲ್ ಲೋನ್ ಬೆಸ್ಟ್. ಕ್ರೆಡಿಟ್ ಕಾರ್ಡ್‌ಗೆ ಹೋಲಿಸಿದರೆ ಇದರ ಬಡ್ಡಿ ದರ ಕಡಿಮೆ. ಸಾಮಾನ್ಯವಾಗಿ ಇದು 12 ರಿಂದ 20 ಪ್ರತಿಶತದವರೆಗೆ ಇರಬಹುದು. ಪರ್ಸನಲ್ ಲೋನ್‌ಗಳಲ್ಲಿ ನೀವು ಕಟ್ಟುವ ಪ್ರತಿ EMI, ನಿಮ್ಮ ಅಸಲು ಮತ್ತು ಬಡ್ಡಿ ಎರಡನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಲ ಯಾವಾಗ ಮುಗಿಯುತ್ತೆ ಅಂತ ನಿಮಗೆ ಮೊದಲೇ ಗೊತ್ತಿರೋದ್ರಿಂದ ಮಾನಸಿಕ ಒತ್ತಡವೂ ಕಡಿಮೆ. ಆದರೆ ಪರ್ಸನಲ್ ಲೋನ್ ತೆಗೆದುಕೊಂಡ ಮೇಲೆ ಪ್ರತಿ ತಿಂಗಳು ತಪ್ಪದೆ EMI ಕಟ್ಟಲೇಬೇಕು.
ಹಾಗಾದ್ರೆ, ನಿಮಗೆ ಯಾವುದು ಸರಿ?
ಕ್ರೆಡಿಟ್ ಕಾರ್ಡ್: ದಿಢೀರ್ ಬರುವ ಸಣ್ಣಪುಟ್ಟ ಖರ್ಚು, ಮುಂದಿನ ತಿಂಗಳೇ ಕಟ್ಟಬಹುದಾದ ಟ್ರಾವೆಲ್ ಬಿಲ್‌ಗಳು, ಮತ್ತು ಬಡ್ಡಿ ರಹಿತ EMI ಆಫರ್‌ಗಳಿಗೆ ಇದನ್ನು ಬಳಸಬಹುದು.
ಪರ್ಸನಲ್ ಲೋನ್: ಆಸ್ಪತ್ರೆ ಖರ್ಚು, ಮನೆ ರಿಪೇರಿ, ಮದುವೆ, ಅಥವಾ ಹೆಚ್ಚು ಬಡ್ಡಿ ಇರುವ ಬೇರೆ ಸಾಲಗಳನ್ನು ತೀರಿಸಲು ಪರ್ಸನಲ್ ಲೋನ್ ಆಯ್ಕೆ ಮಾಡಿಕೊಳ್ಳಿ. ಸಾಲ ತೀರಿಸಲು ಕೆಲವು ತಿಂಗಳುಗಳು ಬೇಕಾಗುತ್ತೆ ಅಂದ್ರೆ ಪರ್ಸನಲ್ ಲೋನ್ ಯಾವಾಗಲೂ ಲಾಭದಾಯಕ.
CIBIL ಸ್ಕೋರ್ ಮೇಲೆ ಏನು ಪರಿಣಾಮ?
ಕ್ರೆಡಿಟ್ ಕಾರ್ಡ್ ಲಿಮಿಟ್‌ನ ಹೆಚ್ಚಿನ ಭಾಗವನ್ನು ಬಳಸುವುದು ನಿಮ್ಮ CIBIL ಸ್ಕೋರ್‌ಗೆ ಹೊಡೆತ ನೀಡಬಹುದು. ಆದರೆ ಪರ್ಸನಲ್ ಲೋನ್ ಮೊತ್ತವು ಸ್ಕೋರ್ ಮೇಲೆ ನೇರವಾಗಿ ಪರಿಣಾಮ ಬೀರಲ್ಲ. ಬದಲಾಗಿ, ಲೋನನ್ನು ಸರಿಯಾಗಿ ಮರುಪಾವತಿ ಮಾಡುವುದು ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಿರ್ಧಾರ ಮಾಡುವ ಮುನ್ನ ಯೋಚಿಸಿ
ಸಾಲ ಮಾಡುವ ಮುನ್ನ ನಿಮಗೆ ನೀವೇ ಎರಡು ಪ್ರಶ್ನೆ ಕೇಳಿಕೊಳ್ಳಿ:
‘ನನಗೆ ಎಷ್ಟು ಹಣ ಬೇಕು’?
'ಇದನ್ನು ಎಷ್ಟು ದಿನದಲ್ಲಿ ವಾಪಸ್ ಕಟ್ಟಬಲ್ಲೆ'?
ಸ್ವಲ್ಪ ಹಣ ಬೇಕಿದ್ದರೆ ಕ್ರೆಡಿಟ್ ಕಾರ್ಡ್ ಬಳಸಿ. ಸಾಲ ತೀರಿಸಲು ತಿಂಗಳುಗಟ್ಟಲೆ ಬೇಕಾಗುತ್ತೆ ಅಂದ್ರೆ ಪರ್ಸನಲ್ ಲೋನ್ ಉತ್ತಮ ದಾರಿ. ನೆನಪಿಡಿ, ಸದ್ಯದ ಸಮಸ್ಯೆಗೆ ಸಿಗೋ ಸುಲಭ ಪರಿಹಾರ, ಮುಂದೆ ದೊಡ್ಡ ತಲೆನೋವಾಗಬಾರದು.



