ಬೆಂಗಳೂರು (ಜು.08): ಕಳೆದ ತಿಂಗಳು ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ IMA ಬಹುಕೋಟಿ ವಂಚನೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ, ತನಿಖೆ ನಡೆಸುತ್ತಿರುವ SIT ತಂಡವು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನೇ ಬಂಧಿಸಿದೆ.

IMA ಕಂಪನಿ ಪರ ವರದಿ ನೀಡಲು ಲಂಚ‌ ಸ್ವೀಕರಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ DC ವಿಜಯ್ ಶಂಕರ್‌ರನ್ನು SITಯು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.   

ವಿಚಾರಣೆ ನಡೆಸಿದ DCP ಗಿರೀಶ್ ನೇತೃತ್ವದ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ. ಮನ್ಸೂರ್ ಖಾನ್‌ನಿಂದ 1.5 ಕೋಟಿ ರೂ. ಲಂಚ ಪಡೆದ ಆರೋಪ ವಿಜಯ್ ಶಂಕರ್ ಮೇಲಿದೆ.

ಕಳೆದ ವಾರವಷ್ಟೇ, IMA ಪರ ವರದಿ ನೀಡಲು ಲಂಚ ಪಡೆದಿರುವ ಆರೋಪದಲ್ಲಿ ಅಸಿಸ್ಟೆಂಟ್ ಕಮಿಷನರ್ ಎಲ್. ನಾಗರಾಜು ಎಂಬವರನ್ನು SITಯು ಬಂಧಿಸಿತ್ತು.

ಅದಕ್ಕಿಂತ ಮುಂಚೆ, ಬ್ಯಾಂಕ್‌ನಲ್ಲಿ 600 ಕೋಟಿ  ರು. ಸಾಲ ಪಡೆಯಲು ಸರ್ಕಾರದ ಎನ್‌ಓಸಿ ಕೊಡಿಸುವುದಾಗಿ ನಂಬಿಸಿ ಐಎಂಎ ಸಂಸ್ಥೆ ಮಾಲೀಕನಿಂದ 4 ಕೋಟಿ ರು. ಹಣ ಪಡೆದ ಆರೋಪದ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯನಿರ್ವಾಹಕ ಅಭಿಯಂತರ ಕುಮಾರ್‌ ಎಂಬವರನ್ನು ಬಂಧಿಸಲಾಗಿತ್ತು.

ಕಳೆದ ತಿಂಗಳಾಂತ್ಯದಲ್ಲಿ  ಆಡಳಿತಾರೂಢ ಜೆಡಿಎಸ್‌ನ ನಾಮ ನಿರ್ದೇಶಿತ ಬಿಬಿಎಂಪಿ ಸದಸ್ಯ ಸೈಯದ್ ಮುಜಾಹಿದ್ ಎಂಬವರನ್ನು SIT ಬಂಧಿಸಿತ್ತು. 

ಹಲಾಲ್ ಹೂಡಿಕೆ ಹೆಸರಿನಲ್ಲಿ ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿ IMA ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದಾನೆ.