ನವದೆಹಲಿ: ಪದೇ ಪದೇ ಎದುರಾಗುವ ಚುನಾವಣೆಗಳಿಂದ ಆಡಳಿತ ಯಂತ್ರ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸಬೇಕು ಎಂಬ ಬಗ್ಗೆ ಕಳೆದ 5 ವರ್ಷಗಳಿಂದ ಪ್ರತಿಪಾದಿಸಿಕೊಂಡು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. 

‘ಒಂದು ದೇಶ, ಒಂದೇ ಚುನಾವಣೆ’ ವಿಷಯವಾಗಿ ಚರ್ಚಿಸಲು ಜೂ. 19ರಂದು ಮೋದಿ ಅವರು ಸರ್ವಪಕ್ಷಗಳ ಸಭೆಯೊಂದನ್ನು ಕರೆದಿದ್ದಾರೆ. ಸೋಮವಾರದಿಂದ ಸಂಸತ್ತಿನ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಜೂ. 19ರ ಸಭೆಗೆ ಹಾಜ ರಾಗುವಂತೆ ಮನವಿ ಮಾಡಿದರು.

19 ರ ಸಭೆಯಲ್ಲಿ ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ ಹಾಗೂ 2022 ಕ್ಕೆ ಆಚರಿಸಬೇಕಿರುವ ಭಾರತದ  75 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಈ ವರ್ಷವೇ ನಡೆಯಬೇಕಾಗಿರುವ ಮಹಾತ್ಮ ಗಾಂಧೀಜಿ ಅವರ 150 ನೇ  ಜನ್ಮ ವರ್ಷಾಚರಣೆ ಕುರಿತು ಚರ್ಚಿಸಲಾಗುತ್ತದೆ ಎಂದು ಹೇಳಿದರು. 

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ ಒಬ್ಬರು ಸದಸ್ಯರನ್ನಾದರೂ ಹೊಂದಿರುವ ಪಕ್ಷಗಳ ಅಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಮೋದಿ ಆಹ್ವಾನಿಸಿದರು ಎಂದು ಸಭೆಯ ನಂತರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

20 ಕ್ಕೆ ಸಂಸದರಿಗೆ ಡಿನ್ನರ್: ಮತ್ತೊಂದೆಡೆ, ಲೋಕಸಭೆ  ಹಾಗೂ ರಾಜ್ಯಸಭೆಯ ಎಲ್ಲ ಸದಸ್ಯರಿಗೂ ಕೇಂದ್ರ ಸರ್ಕಾರ ಜೂ.20 ರಂದು ಔತಣ ಕೂಟ ಆಯೋಜಿಸಿದೆ. ಈ ಸಂದರ್ಭದಲ್ಲಿ ಸಂಸದರು ಮುಕ್ತವಾಗಿ ಸಂವಾದ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಬಹುದಾಗಿದೆ ಎಂದು ಜೋಶಿ ವಿವರಿಸಿದರು.