ಗ್ಯಾಂಗ್ಟಕ್‌: ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಪಕ್ಷದ ಪಿ.ಎಸ್‌. ಗೋಲೆ ಅವರು ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 

ಇದರ ಬೆನ್ನಲ್ಲೇ ಅವರು ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸರ್ಕಾರಿ ನೌಕರರು ಇನ್ನು ವಾರದ 6 ದಿನ ಬದಲು 5 ದಿನ ಕೆಲಸ ಮಾಡಿದರೆ ಸಾಕು. ಈ ಸಂಬಂಧ ಚುನಾವಣೆಪೂರ್ವ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿರುವುದಾಗಿ ತಿಳಿಸಿದ್ದಾರೆ. 

ಇದೇ ವೇಳೆ, ತಾವೂ ಸೇರಿದಂತೆ ಸಚಿವರು, ಶಾಸಕರು ಇನ್ನು ಮುಂದೆ ಫಾರ್ಚೂನರ್‌ ಕಾರು ಬಳಸುವುದಿಲ್ಲ. ಬದಲಾಗಿ ಸ್ಕಾರ್ಪಿಯೋ ಕಾರು ಬಳಸುತ್ತೇವೆ. ಸ್ಕಾರ್ಪಿಯೋ ಕಾರು ಲಭ್ಯವಾಗುವವರೆಗೆ ಫಾರ್ಚೂನರ್‌ನಲ್ಲಿ ಓಡಾಡುತ್ತೇವೆ ಎಂದಿದ್ದಾರೆ. 

ಇನ್ನು ಚುನಾವಣಾ ಭರವಸೆಯಿಂದ ರಾಜ್ಯದ ಎಲ್ಲಾ ನಾಗರಿಕರಿಗೆ ಕನಿಷ್ಠ ಆದಾಯ ಯೋಜನೆ ಜಾರಿ ಮಾಡುವ ಬಗ್ಗೆಯೂ ಸರ್ಕಾರ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.