ಕಾಂಗ್ರೆಸ್ ಪ್ರಮುಖ ನಾಯಕರೆದುರು ಘೋಷಣೆ ನಾಯಕತ್ವ ವಿಚಾರದಲ್ಲಿ ಗೊಂದಲ ಬೇಡ: ತಾಕೀತು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕ ಎನಿಸಿರುವ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸಲಿದೆ. ಹೀಗಂತ ರಾಜ್ಯ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರ ಸಮ್ಮುಖದಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರದ ಬಗ್ಗೆ ಇನ್ನು ಮುಂದೆ ಯಾವುದೇ ರೀತಿಯ ಗೊಂದಲ ನಿರ್ಮಾಣವಾಗದಂತೆ ಎಚ್ಚರ ವಹಿಸಲು ನಾಯಕರಿಗೆ ತಾಕೀತು ಮಾಡಿದ್ದಾರೆ.

ದೆಹಲಿಯಲ್ಲಿ ಗುರುವಾರ ತಮ್ಮ ನಿವಾಸದಲ್ಲಿ ರಾಜ್ಯದ ಎಲ್ಲಾ ಪ್ರಮುಖರೊಂದಿಗೆ ಸಭೆ ನಡೆಸಿದ ರಾಹುಲ್ ಗಾಂಧಿ ಪ್ರಮುಖವಾಗಿ ಚುನಾವಣೆ ನೇತೃತ್ವದ ವಿಚಾರದ ಬಗೆಗಿನ ಗೊಂದಲವನ್ನು ಪರಿಹರಿಸಿದರು ಮತ್ತು ಇನ್ನೂ ಈ ವಿಚಾರದಲ್ಲಿ ಯಾವ ಗೊಂದಲವಿಟ್ಟುಕೊಳ್ಳಬಾರದು ಮತ್ತು ಗೊಂದಲ ಉಂಟಾಗಲು ಆಸ್ಪದವನ್ನು ನೀಡಬಾರದು ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಸತೀಶ ಜಾರಕಿಹೊಳಿ ಸೇರಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಭಾಗವಹಿಸಿದ್ದರು.

ಇದಲ್ಲದೆ, ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ತಯಾರಿ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರೆದಿದ್ದ ಸಭೆಯಲ್ಲಿ ಹೆಣೆಯ ಬೇಕಾದ ರಣತಂತ್ರದ ಕುರಿತು ವಿಸ್ತೃತ ಚರ್ಚೆ ನಡೆದಿದ್ದು ಬೂತ್ ಸಮಿತಿ ನೇಮಕದಿಂದ ಹಿಡಿದು ಟಿಕೆಟ್ ಹಂಚಿಕೆವರೆಗೆ ಎಲ್ಲಾ ವಿಷಯಗಳನ್ನೂ ಚರ್ಚಿಸಲಾಗಿದೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಎಂದು ರಾಹುಲ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. 

ಚುನಾವಣೆಗೆ ಸೂಕ್ತ ಸಿದ್ಧತೆ- ಸಿಎಂ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚುನಾವಣಾ ಸಿದ್ಧತೆ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು 54 ಸಾವಿರ ಬೂತ್ ಸಮಿತಿ ಮಾಡಲಾಗಿದೆ. ಒಂದೂವರೆ ಕೋಟಿ ಪುಸ್ತಕಗಳನ್ನು ಮುದ್ರಣ ಮಾಡಲಾಗಿದೆ. ಬೂತ್‌ಗಳಲ್ಲಿ ಪುಸ್ತಕಗಳನ್ನು ಕಾರ್ಯಕರ್ತರು ಹಂಚಿಕೆ ಮಾಡಲಿದ್ದಾರೆ. ಟಿಕೆಟ್ ಹಂಚಿಕೆ ಮುಂಚಿತವಾಗಿಯೇ ರಾಜ್ಯಪ್ರವಾಸ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಮೇರಗೆ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದರು.