ಬಾಗಲಕೋಟೆ: ಎಚ್‌.ಡಿ. ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗುವುದಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಭಿಮಾನ ಬಿಟ್ಟು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಬಳಿ ಹೋಗಿದ್ದರು ಎಂಬ ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ‘ಅಯ್ಯೋ ಪ್ರತಾಪ ಸಿಂಹನ ಬಗ್ಗೆ ಏಕೆ ಕೇಳ್ತೀರಿ ಬಿಡ್ರಿ. 2019ರಲ್ಲಿ ಮನೆಗೆ ಹೋಗ್ತಾನೆ’ ಎಂದರು.

ಜಮಖಂಡಿ ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಾಪ ಸಿಂಹ 2019ರಲ್ಲಿ ಮನೆಗೆ ಹೋಗುವುದು ಖಚಿತ ಎಂದು ಭವಿಷ್ಯ ನುಡಿದರು.

ಸಿಬಿಐನಲ್ಲಿ ಏನೆಲ್ಲಾ ಬೆಳವಣಿಗೆ ಆಗಿವೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಣೆಗಾರರು. ತನಿಖಾ ಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳು. ಕೇಂದ್ರ ಸರ್ಕಾರ ಕೈ ಹಾಕಿ ಹಾಳು ಮಾಡಿದೆ. ತನ್ನ ಮಾತು ಕೇಳುವವರನ್ನು ತಂದು ಹುದ್ದೆಗೆ ಕೂಡಿಸಿದೆ. ಹಾಗಾಗಿ ಅಸಮಾಧಾನ ಶುರುವಾಗಿ ಸ್ಫೋಟವಾಗಿದೆ ಎಂದರು.