ನವದೆಹಲಿ[ಆ.20]: ಭಾರತೀಯ ಸೇನೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿ, ದೌರ್ಜನ್ಯ ನಡೆಸುತ್ತಿದೆ ಎಂದು ಗಂಭೀರ ಆರೋಪವೆಸಗಿದ್ದ ಶೆಹ್ಲಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಾರತೀಯ ಸೇನೆಯೂ ಈ ಆರೋಪವನ್ನು ತಳ್ಳಿ ಹಾಕಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮತ್ತೆ ಧ್ವನಿ ಎತ್ತಿರುವ ಶೆಹ್ಲಾ ಭಾರತೀಯ ಸೇನೆ ಕಾಶ್ಮೀರದಲ್ಲಿ ದೌರ್ಜನ್ಯ ನಡೆಸುತ್ತಿರುವುದಕ್ಕೆ ತನ್ನ ಬಳಿ ಸಾಕ್ಷಿ ಇದೆ ಎಂದಿದ್ದಾರೆ. 

ಮಂಗಳವಾರ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಶೆಹ್ಲಾ 'ಭಾರತೀಯ ಸೇನೆ ನಿಷ್ಪಕ್ಷಪಾತ ತನಿಖೆ ನಡೆಸಲಿ. ನಾನೇ ಅವರಿಗೆ ಈ ಆರೋಪ ಸಾಬೀತುಪಡಿಸುವ ಸಾಕ್ಷಿಗಳನ್ನು ದಾಖಲೆ ಸಮೇತ ನೀಡುತ್ತೇನೆ. ನಾನು ಮಾಡಿದ ಆರೋಪಗಳು ಸುಳ್ಳಲ್ಲ ಎಂದು ಸಾಬೀತುಪಡಿಸಿದರೆ ಸೇನೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾ?' ಎಂದು ಪ್ರಶ್ನಿಸಿದ್ದಾರೆ.

ಕಾಶ್ಮೀರ ನಾಗರಿಕರ ಮೇಲೆ ದೌರ್ಜನ್ಯವಾಗಿಲ್ಲ, ಶೆಹ್ಲಾ ಹೇಳಿದ್ದೆಲ್ಲಾ ಸುಳ್ಳು: ಭಾರತೀಯ ಸೇನೆ

ಇನ್ನು ಶೆಹ್ಲಾ ಸೇನೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ ಬೆನ್ನಲ್ಲೇ, ಭಾರತೀಯ ಸೇನೆ ಹಾಗೂ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಮೂಲಕ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ  ಸುಪ್ರೀಂ ಕೋರ್ಟ್ ವಕೀಲ ಅಲಕ್ ಅಲೋಕ್ ಶ್ರೀವಾಸ್ತವ್ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶೆಹ್ಲಾ 'ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದಾರಲ್ಲವೇ? ಹೀಗಿರುವಾಗ ನಾನು ಮಾಡಿದ ಟ್ವೀಟ್ಸ್ ಹಿಂಸಾಚಾರಕ್ಕೆ ಹೇಗೆ ಪ್ರೇರೇಪಿಸುತ್ತವೆ?' ಎಂದು ಪ್ರಶ್ನಿಸಿದ್ದಾರೆ.

ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸ್ಬೇಡಿ: ಶೆಹ್ಲಾಗೆ ಕಾಂಗ್ರೆಸ್ ನಾಯಕನ ಮನವಿ!

ಅಲ್ಲದೇ ’ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಹೊರ ಜಗತ್ತಿಗೆ ತಿಳಿಯದಂತೆ ಸರ್ಕಾರ ಹತ್ತಿಕ್ಕುತ್ತಿದೆ. ಇಂಟರ್ನೆಟ್ ಸೇವೆ, ಫೋನ್ ಸೇವೆ ಸ್ಥಗಿತಗೊಳಿಸುವ ಮೂಲಕ ಸರ್ಕಾರ ಮಾನವ ಹಕ್ಕು ಉಲ್ಲಂಘಿಸಿದೆ. ನಾನು ಖುದ್ದು ಅಲ್ಲಿನ ಜನರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅವರು ವದಂತಿ ಹಬ್ಬಿಸುವವರಲ್ಲ, ಅವರೆಲ್ಲಾ ನಿಜವಾದ ಕಾಶ್ಮೀರಿಗಳು. ಒಂದು ವೇಳೆ ಸ್ಥಗಿತಗೊಳಿಸಿರುವ ಸೇವೆಗಳನ್ನು ಮತ್ತೆ ಆರಂಭಿಸಿದರೆ, ಎಲ್ಲವೂ ಬಯಲಾಗುತ್ತದೆ. ನಾನೇನೂ ಹೇಳಬೇಕೆಂದಿಲ್ಲ' ಎಂದಿದ್ದಾರೆ.