ಕಾಶ್ಮೀರ ನಾಗರಿಕರ ಮೇಲೆ ದೌರ್ಜನ್ಯವಾಗಿಲ್ಲ, ಶೆಹ್ಲಾ ಹೇಳಿದ್ದೆಲ್ಲಾ ಸುಳ್ಳು: ಭಾರತೀಯ ಸೇನೆ
ಕಾಶ್ಮೀರ ನಾಗರಿಕರ ಮೇಲೆ ಭದ್ರತಾ ಸಿಬ್ಬಂದಿಯಿಂದ ದೌರ್ಜನ್ಯ| ಭಾರತೀಯ ಸೇನೆ ವಿರುದ್ಧ ಶೆಹ್ಲಾ ರಶೀದ್ ಗಂಭೀರ ಆರೋಪ| ಕಾಶ್ಮೀರದಲ್ಲಿ ದೌರ್ಜನ್ಯ ನಡೆಯುತ್ತಿಲ್ಲ, ಸೇನೆ ಸ್ಪಷ್ಟನೆ| ಶೆಹ್ಲಾ ವಿರುದ್ಧ ದಾಖಲಾಯ್ತು ಕೇಸ್
ನವದೆಹಲಿ[ಆ.19]: JNU ಹಳೆ ವಿದ್ಯಾರ್ಥಿ ನಾಯಕಿ ಹಾಗೂ ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಡಿರುವ ಟ್ವೀಟ್ ನಲ್ಲಿರುವುದು ವಾಸ್ತವವಲ್ಲ ಎಂದು ಭಾರತೀತಯ ಸೇನೆ ಸ್ಪಷ್ಟನೆ ನೀಡಿದೆ. ಶೆಹ್ಲಾ ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಕಾಶ್ಮೀರ ಕಣಿವೆಯ ಪರಿಸ್ಥಿತಿ ಸರಿ ಇಲ್ಲ, ಭದ್ರತಾ ಸಿಬ್ಬಂದಿ ಇಲ್ಲಿನ ನಾಗರಿಕರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕಾಶ್ಮೀರ ನಿರ್ಬಂಧ ಸಡಿಲ: ದೂರವಾಣಿ 2ಜಿ ಸೇವೆ ಪುನಾರಂಭ!
ಶೆಹ್ಲಾ ಟ್ವೀಟ್‌ನಲ್ಲೇನಿದೆ?
ಸರಣಿ ಟ್ವೀಟ್ ಗಳನ್ನು ಮಾಡಿದ್ದ ಜೆ ಎನ್ ಯು ಹಳೆ ವಿದ್ಯಾರ್ಥಿನಿ ಶೆಹ್ಲಾ ರಶೀದ್ 'ಭದ್ರತಾ ಸಿಬ್ಬಂದಿ ರಾತ್ರಿ ವೇಳೆ ಇಲ್ಲಿನ ಜನರ ಮನೆಗೆ ಪ್ರವೇಶಿಸಿ ಯುವಕರನ್ನು ಎಳೆದೊಯ್ಯುತ್ತಿದ್ದಾರೆ ಹಾಗೂ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳು ಮಾಡುತ್ತಿದ್ದಾಋಎ. ಮನೆಯೊಳಗಿರುವ ಅಕ್ಕಿ, ಕಾಳು, ಎಣ್ಣೆ ಮೊದಲಾದ ಆಹಾರ ಸಾಮಗ್ರಿಗಳನ್ನು ನೆಲದ ಮೇಲೆ ಚೆಲ್ಲಿ ಹಾಳುಗೆಡವುತ್ತಿದ್ದಾರೆ. ಶೋಪಿಯಾಂದಲ್ಲಿ ನಾಲ್ವರನ್ನು ಆರ್ಮಿ ಕ್ಯಾಂಪ್ ಗೆ ಕರೆಸಿ, ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಮೈಕ್ ಒಂದನ್ನು ನೀಡಲಾಗಿತ್ತು. ಈ ಮೂಲಕ ಇಡೀ ಇಲಾಖೆಗೆ ಅವರ ಕೂಗು ಕೇಳಿಸಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಕಣಿವೆ ನಾಡಿನ ಜನರಲ್ಲಿ ಭಯ ಮನೆ ಮಾಡಿದೆ' ಎಂದಿದ್ದರು.
ಆದರೀಗ ಭಾರತೀಯ ಸೇನೆ ಶೆಹ್ಲಾ ಆರೋಪವನ್ನು ತಳ್ಳಿ ಹಾಕಿದ್ದು, ಇದೆಲ್ಲಾ ಸುಳ್ಳಿನ ಕಂತೆ. ಸಮಾಜದ ಶಾಂತಿ ಕೆಡಿಸಲು ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದಿದೆ. ಇಂದು ಸೋಮವಾರದಿಂದ ಕಾಶ್ಮೀರದ ಖಾಸಗಿ ಶಾಲೆಗಳು ಆರಂಭವಾಗಿದೆ ಎಂಬುವುದು ಉಲ್ಲೇಖನೀಯ.
ಇನ್ನು ಭಾರತೀಯ ಸೇನೆ ಹಾಗೂ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿಯಲ್ಲಿ ಶೆಹ್ಲಾ ರಶೀದ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ಅಲಕ್ ಅಲೋಕ್ ಶ್ರೀವಾಸ್ತವ್ ವಿರುದ್ಧ ದೂರು ದಾಖಲಿಸಿದ್ದಾರೆ.