ಚುನಾವಣಾ ಕಣಕ್ಕೆ ನಿವೃತ್ತ ಡಿಜಿಪಿ ಶಂಕರ್ ಬಿದರಿ : ಯಾವ ಕ್ಷೇತ್ರದಿಂದ ಸ್ಪರ್ಧೆ ..?

First Published 31, Mar 2018, 10:34 AM IST
Shankar Bidari Contest Election
Highlights

ನಿವೃತ್ತ ಡಿಜಿಪಿಯೂ ಆಗಿರುವ ಬಿಜೆಪಿ ಮುಖಂಡ ಶಂಕರ್ ಬಿದರಿ ಅವರು ಚಿತ್ರದುರ್ಗ ಅಥವಾ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ಸುದ್ದಿ ಪಕ್ಷದ ಪಾಳೆಯದಲ್ಲಿ ಸುಳಿದಾಡುತ್ತಿದೆ.

ಬೆಂಗಳೂರು : ನಿವೃತ್ತ ಡಿಜಿಪಿಯೂ ಆಗಿರುವ ಬಿಜೆಪಿ ಮುಖಂಡ ಶಂಕರ್ ಬಿದರಿ ಅವರು ಚಿತ್ರದುರ್ಗ ಅಥವಾ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬ ಸುದ್ದಿ ಪಕ್ಷದ ಪಾಳೆಯದಲ್ಲಿ ಸುಳಿದಾಡುತ್ತಿದೆ.

ಹಾಲಿ ಶಾಸಕ ತಿಪ್ಪಾರೆಡ್ಡಿ ಅವರೇ ಚಿತ್ರದುರ್ಗದ ಅಭ್ಯರ್ಥಿ ಎಂದು ಸ್ವತಃ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇದರ ನಡುವೆಯೂ ಶಂಕರ್ ಬಿದರಿ ಹೆಸರು ಕೇಳಿಬರುತ್ತಿರುವುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಶಂಕರ್ ಬಿದರಿ ಅವರು, ಚಿತ್ರದುರ್ಗ ಕ್ಷೇತ್ರದಲ್ಲಿ ಟಿಕೆಟ್ ಕೊಡುವಂತೆ ಬಿಜೆಪಿ ಹೈಕಮಾಂಡ್ ಬಳಿ ಚರ್ಚಿಸಿದ್ದೇನೆ. ಈ ಬಗ್ಗೆ ಪೂರಕ ಸ್ಪಂದನೆ ಕೇಳಿಬಂದಿದೆ. ಟಿಕೆಟ್ ನೀಡುವ ಭರವಸೆ ವ್ಯಕ್ತವಾಗಿದೆ. ಟಿಕೆಟ್ ನೀಡಿದರೆ ಸ್ಪರ್ಧಿಸುವುದು ಖಚಿತ ಎಂದರು.

ಹಾಗೆ ನೋಡಿದರೆ ಚಿತ್ರದುರ್ಗ ಶಂಕರ್ ಬಿದರಿ ಅವರಿಗೆ ಹೊಸದೇನಲ್ಲ. ಎರಡೂವರೆ ದಶಕಗಳ ಹಿಂದೆ ಚಿತ್ರದುರ್ಗದಲ್ಲಿ ಎಸ್‌ಪಿ ಆಗಿ ಕಾರ್ಯನಿರ್ವಹಿಸಿದ್ದರು. ಚಿತ್ರದುರ್ಗದ ಮುರುಘಾಮಠ ಬಿದರಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೆಲ್ಲದರ ನಡುವೆ ಅವರೀಗ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರೂ ಹೌದು. ಚಿತ್ರದುರ್ಗ ಕ್ಷೇತ್ರದ ಮೇಲೆ ಹೊರಗಿನವರೇ ‘ದಾಳಿ’ ಮಾಡುತ್ತಿರುವ ಈ ವೇಳೆ ಶಂಕರ್ ಬಿದರಿ ಹೆಸರು ಹೊಸ ಸೇರ್ಪಡೆಯಾಗಿದೆ.

ಈ ಹಿಂದೆ ಎರಡು ಬಾರಿ ವಿಧಾನಸಭೆ ಚುನಾವಣೆ ವೇಳೆ ಶಂಕರ್ ಬಿದರಿ ಹೆಸರು ಪ್ರಸ್ತಾಪವಾಗಿತ್ತು. ರಾಷ್ಟ್ರೀಯ ಪಕ್ಷಗಳು ಅವರಿಗೆ ಟಿಕೆಟ್ ನಿರಾಕರಿಸಿದ್ದವು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಪಕ್ಷೇತರರಾಗಿ ಅವರು ಸ್ಪರ್ಧಿಸಿ ಸೋಲನುಭವಿಸಿದ್ದರು.

ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಜೆಪಿಯಿಂದ ಸದ್ಯದ ಪರಿಸ್ಥಿತಿಯಲ್ಲಿ ವೀರಶೈವ ಲಿಂಗಾಯತರೊಬ್ಬರನ್ನು ಕಣಕ್ಕಿಳಿಸುವ ಚಿತ್ರಣವಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿರುವ ಎರಡು ಸಾಮಾನ್ಯ ಕ್ಷೇತ್ರಗಳ ಪೈಕಿ ಲಿಂಗಾಯತರಿಗೆ ಟಿಕೆಟ್ ಪ್ರಸ್ತಾಪವಿಲ್ಲ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದಲ್ಲಿ ಲಿಂಗಾಯತರು ನಿರ್ಣಾಯಕ ಸ್ಥಾನದಲ್ಲಿದ್ದರೂ ಅಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.

ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲೂ ಲಿಂಗಾಯತರ ಮತಗಳು ಅಧಿಕ ಪ್ರಮಾಣದಲ್ಲಿವೆ. ಒಂದು ವೇಳೆ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಹಾಲಿ ಶಾಸಕ ತಿಪ್ಪಾರೆಡ್ಡಿ ಅವರ ಪರವಾಗಿ ಅಭಿಪ್ರಾಯ ವ್ಯಕ್ತವಾಗದಿದ್ದರೆ ಬಿದರಿ ಅವರನ್ನು ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ.

loader