ಬೆಂಗಳೂರು[ಜೂ. 19] ಎಚ್. ವಿಶ್ವನಾಥ್ ಕಾಂಗ್ರೆಸ್ ನಲ್ಲಿ ಪ್ರಖರ ನಾಯಕರಾಗಿದ್ದವರು. ಬದಲಾದ ರಾಜಕಾರಣದ ಸ್ಥಿತಿ ಅವರನ್ನು ಜೆಡಿಎಸ್ ಗೆ ಕರೆದುತಂದಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿಯೂ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿಯೂ ಕೆಲಸ ಮಾಡಿದ್ದ ವಿಶ್ವನಾಥ್ ದೋಸ್ತಿ ಸರಕಾರ ಅದರಲ್ಲಿಯೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೇಲೆ ಪದೆ ಪದೆ ಮುನಿಸು ಹೊರಹಾಕುತ್ತಲೇ ಬಂದರು. 

ಜಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವನಾಥ್ ಮುಂದೆ ಇರುವ ಆಯ್ಕೆ ಅನಿವಾರ್ಯವಾಗಿ ಬಿಜೆಪಿಯೇ ಆಗಿದೆ. ಹಿಂದಿನ ಮನೆ ಕಾಂಗ್ರೆಸ್ ಗೆ ಹೋಗುವಂತೆ ಇಲ್ಲ. ಜೆಡಿಎಸ್ ನಲ್ಲಿ ಇದ್ದುಕೊಂಡು ಸಾಧನೆ ಮಾಡಲು ಸಿದ್ದರಾಮಯ್ಯ ಬಿಡುತ್ತಿಲ್ಲ. 

ವಿಶ್ವನಾಥ್ ಮತ್ತೊಂದು ಕೃತಿ ಬಿಡುಗಡೆಗೆ ರೆಡಿ, ಹಚ್ಚಿದೆ ವಿವಾದದ ಕಿಡಿ!

ಶ್ರೀನಿವಾಸ ಪ್ರಸಾದ್ ಭೇಟಿ:   ಇಂಥ ಸಂದರ್ಭದಲ್ಲಿ ವಿಶ್ವನಾಥ್ ಹೊಸ ಆಯ್ಕೆಯ ಹುಟುಕಾಟವನ್ನು ನಡೆಸಿಯೇ ಇದ್ದಾರೆ.  ಮೊದಲ ಹಂತ ಎಂಬಂತೆ ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲಿ ಪ್ರಭಾವಿ ಸಚಿವರಾಗಿದ್ದು ಇದೀಗ ಬಿಜೆಪಿ ಸೇರಿ  ಚಾಮರಾಜನಗರ ಸಂಸದರಾಗಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು.

ರಾಮಲಿಂಗಾ ರೆಡ್ಡಿ ಮತ್ತು ರೋಶನ್ ಬೇಗ್ ಭೇಟಿ:  ಕಾಂಗ್ರೆಸ್ ವಿರುದ್ಧವೇ ಮಾತನಾಡಿದ್ದ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಅಮಾನತುಗೊಂಡಿರುವ ಶಾಸಕ ರೋಶನ್ ಬೇಗ್ ಅವರೊಂದಿಗೂ ವಿಶ್ವನಾಥ್  ಒಂದು ಹಂತದ ಮಾತುಕತೆ ಮಾಡಿದ್ದು ತಮ್ಮ ತೀರ್ಮಾನಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಎಸ್ ಎಂ ಕೃಷ್ಣ ಮುಖೇನ ಸೇರ್ಪಡೆ? ಹಿಂದೆ ವಿಶ್ವನಾಥ್ ಎಸ್ ಎಂ ಕೃಷ್ಣ ಅವರ ಸಂಪುಟದಲ್ಲಿ ಕೆಲಸ ಮಾಡಿದ್ದವರು. ಈಗ ಎಸ್ ಎಂಕೆ ಬಿಜೆಪಿಯಲ್ಲಿ ಇದ್ದಾರೆ. ಒಂದು ವೇಳೆ ವಿಶ್ವನಾಥ್ ತೀರ್ಮಾನ ತೆಗೆದುಕೊಂಡಿದ್ದೆ ಆದರೆ ಎಸ್ ಎಂಕೆ ಮೂಲಕವೇ ಬಿಜೆಪಿ ಪಾಳಯಕ್ಕೆ ಎಂಟ್ರಿ ಪಡೆದುಕೊಳ್ಳಲಿದ್ದಾರೆ.

ಹಳೆ ಮೈಸೂರಲ್ಲಿ ಬಿಜೆಪಿಗೆ ಶಕ್ತಿ: ವಿಶ್ವನಾಥ್ ಬಿಜೆಪಿಗೆ ಬಂದರೆ ಹಳೆ ಮೈಸೂರು ಭಾಗದಲ್ಲಿ ಶ್ರೀನಿವಾಸ್  ಪ್ರಸಾದ್ ಅವರೊಂದಿಗೆ ಸೇರಿ ಬಿಜೆಪಿ ಹೊಸ ಅಸ್ತಿತ್ವ ಹುಡುಕಿಕೊಳ್ಳಬಹುದು.