ಚೆನ್ನೈ, [ಆ.14]: ದರೋಡೆಕಾರರು ಯಾವತ್ತೂ ಕಳ್ಳತನ ಮಾಡಲು ಒಂಟಿ ಮಹಿಳೆಯರು ಅಥವಾ ವೃದ್ಧರಿರುವ ಮನೆಯನ್ನೇ ಗುರಿಯಾಗಿಸಿಕೊಳ್ಳುತ್ತಾರೆ. ನಮ್ಮನ್ನು ಎದುರಿಸಲಾರರು ಎಂಬ ಭಂಡತನವೋ ಅಥವಾ ಭಯಪಡುತ್ತಾರೆಂಬ ಭಾವನೆಯೋ. ಆದರೀಗ ದರೋಡೆಕೋರರ ಇಂತಹ ನಂಬಿಕೆಯನ್ನು ಹುಸಿಯಾಗಿಸುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ವೃದ್ಧ ದಂಪತಿಯ ಮನೆಯಲ್ಲಿ ದರೋಡೆ ಮಾಡಲು ಬಂದವರನ್ನು ಅಜ್ಜ ಅಜ್ಜಿ ಹಿಮ್ಮೆಟ್ಟಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಚೆನ್ನೈನ ತಿರುನಲ್ವೇಲಿಯಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಶಣ್ಮುಗವೇಲ್‌ ಹಾಗೂ ಸೆಂತಮರೈ ವೃದ್ಧ ದಂಪತಿಗಳ ಮೇಲೆ ಇಬ್ಬರು ದರೋಡೆಕೋರರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದಾರೆ. ಷಣ್ಮುಖವೇಲ್‌ ಹಾಗೂ ಅವರ ಪತ್ನಿ ರಾತ್ರಿ ಊಟ ಮುಗಿಸಿ ಮನೆಯ ಹೊರಭಾಗದಲ್ಲಿ ಕುಳಿತಿದ್ದರು. ಕೆಲ ಸಮಯದ ಬಳಿಕ ಪತ್ನಿ ಅಲ್ಲಿಂದೆದ್ದು ಮನೆಯೊಂಗೆ ತೆರಳುತ್ತಾರೆ. ಈ ವೇಳೆ ಒಬ್ಬ ಷಣ್ಮುಖವೇಲ್‌  ಹಿಂಭಾಗದಿಂದ ಬಂದು ಕುತ್ತಿಗೆಗೆ ಟವಲ್‌ ಬಿಗಿದು ಕೊಲೆ ಮಾಡಲು ಯತ್ನಿಸುತ್ತಾನೆ. ಈ ವೇಳೆ ಅಜ್ಜ ಅಪಾಯದ ಅರಿವಾಗಿ ಜೋರಾಗಿ ಕೂಗಿದ್ದಾರೆ.

ಗಂಡ ಕೂಗಿದ್ದನ್ನು ಕೇಳಿ ಓಡೋಡಿ ಬಂದ ಅಜ್ಜಿ ದರೋಡೆಕೋರರನ್ನು ಕಂಡು ಪಕ್ಕದಲ್ಲಿದ್ದ ಕುರ್ಚಿಯನ್ನೆತ್ತಿ ದರೋಡೆಕೋರರ ದಾಳಿ ನಡೆಸಿದ್ದಾರೆ. ಅಷ್ಟರಲ್ಲಿ ಅಜ್ಜ ಕೂಡಾ ತನ್ನನ್ನು ತಾನು ದರೋಡೆಕೋರರಿಂದ ಬಿಡಿಸಿಕೊಳ್ಳಲು ಯಶಸ್ವಿಯಾಗಿದ್ದು, ತಾವೂ ಅಜ್ಜಿಗೆ ಸಾಥ್ ನೀಡಿದ್ದಾರೆ. ದರೋಡೆಕೋರರು ತಮ್ಮಲ್ಲಿದ್ದ ಆಯುಧಗಳಿಂದ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ಹಿಂದೆ ಸರಿಯದ ಇಬ್ಬರೂ ಧೈರ್ಯದಿಂದ ದರೋಡೆಕೋರರನ್ನು ಹೊಡೆದೋಡಿಸಿದ್ದಾರೆ.

ಸದ್ಯ ಕಳ್ಳರನ್ನು ಹಿಮ್ಮೆಟ್ಟಿಸಿದ ಅಜ್ಜ ಅಜ್ಜಿಯ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ.