ಕನ್ನಡದಲ್ಲಿ ನವಕೋಟಿ ನಾರಾಯಣ ಚಿತ್ರದಿಂದ ಹಿಡಿದು, ಚೂರಿ ಚಿಕ್ಕಣ್ಣ, ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ಚೆಲುವ, ಕಲಾವಿದ, ತುತ್ತಾ-ಮುತ್ತಾ, ಸ್ನೇಹಲೋಕ, ತಂದೆಗೆ ತಕ್ಕ ಮಗ ಚಿತ್ರದಲ್ಲಿ ರಾಧಾ ಅಭಿನಯಿಸಿದ್ದರು.

ಬೆಂಗಳೂರು(ಸೆ.10): ಹಿರಿಯ ಬಹುಭಾಷಾ ನಟಿ ಬಿ.ವಿ.ರಾಧಾ(69) ಇಂದು ಮುಂಜಾನೆ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಿ.ವಿ.ರಾಧಾ ಅವರ ನಿವಾಸದಲ್ಲೇ ಬೆಳಗಿನ ಜಾವ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದಿದ್ದಾರೆ.

ಕನ್ನಡದಲ್ಲಿ ನವಕೋಟಿ ನಾರಾಯಣ ಚಿತ್ರದಿಂದ ಹಿಡಿದು, ಚೂರಿ ಚಿಕ್ಕಣ್ಣ, ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ಚೆಲುವ, ಕಲಾವಿದ, ತುತ್ತಾ-ಮುತ್ತಾ, ಸ್ನೇಹಲೋಕ, ತಂದೆಗೆ ತಕ್ಕ ಮಗ ಚಿತ್ರದಲ್ಲಿ ರಾಧಾ ಅಭಿನಯಿಸಿದ್ದರು.

ಹಿರಿಯ ನಿರ್ದೇಶಕ, ನಟ, ಗಾಯಕ ಕೆ.ಎಸ್.ಎಲ್.ಸ್ವಾಮಿಯವರನ್ನು ವಿವಾಹವಾಗಿದ್ದ ಬಿ.ವಿ.ರಾಧಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಕೆ.ಎಸ್.ಎಲ್.ಸ್ವಾಮಿ ಮತ್ತು‌ ಬಿ.ವಿ.ರಾಧಾ ಇಬ್ಬರೂ ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡಲು ಇಚ್ಛಿಸಿದ್ದರು. ಹಾಗಾಗಿ 2015ರಲ್ಲಿ ಮೃತಪಟ್ಟಿದ್ದ ಕೆ.ಎಸ್.ಎಲ್.ಸ್ವಾಮಿ ಅವರ ದೇಹವನ್ನು ರಾಮಯ್ಯ ಆಸ್ಪತ್ರೆಗೆ ನೀಡಲಾಗಿತ್ತು, ಇದೀಗ ರಾಧಾ ಅವರ ಮೃತದೇಹವನ್ನೂ ರಾಮಯ್ಯ ಆಸ್ಪತ್ರೆಗೆ ನೀಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.