ತ್ರಿಮೂರ್ತಿ ರೂಪನ ವರ ಪಡೆದ ವಿನಯ್ ಗುರೂಜಿ ಶಕ್ತಿ ಏನು..?
ದತ್ತಾತ್ರೇಯ ಸ್ವಾಮಿಯ ಕೃಪಾಕಟಾಕ್ಷ ಪಡೆದಿದ್ದಾರಂತೆ ಈ ಸ್ವಾಮೀಜಿ
ದತ್ತನ ಪುತ್ರನ ಪಾದದಡಿಯಲ್ಲಿ ದೊಡ್ಡ ದೊಡ್ಡ ನಾಯಕರು, ಸ್ಟಾರ್ಗಳು
ವಿನಯ್ ಗುರೂಜಿಗೆ ಕನಸಲ್ಲಿ ಕಂಡರಂತೆ ದತ್ತಾತ್ರೇಯ
ದತ್ತಾತ್ರೇಯನ ಭಕ್ತ.. ಗಾಂಧೀ ತತ್ವಗಳ ಅನುಯಾಯಿ
ಬೆಂಗಳೂರು(ಜೂ.9): ದತ್ತಾತ್ರೇಯ ಎಂದರೆ, ಆತ ತ್ರಿಮೂರ್ತಿಗಳ ಅಂಶಗಳನ್ನೆಲ್ಲ ಒಳಗೊಂಡ ಗುಣರೂಪ. ಬ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿಗಯನ್ನು ಒಳಗೊಂಡ ದೊಡ್ಡ ಶಕ್ತಿಶಾಲಿ ದೈವ. ಇದು ಆ ದತ್ತಾತ್ರೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವ ಒಬ್ಬ ಸ್ವಾಮೀಜಿಯ ಕಥೆ.
ಈ ದತ್ತಾತ್ರೇಯ ಕೃಪಾ ಕಟಾಕ್ಷ ಪಡೆದಿರುವ ಈ ಸ್ವಾಮೀಜಿಯ ವಯಸ್ಸು ಇನ್ನೂ 30 ದಾಟಿಲ್ಲ. ಹೆಸರು ವಿನಯ್. ಭಕ್ತರು ಇವರನ್ನ ವಿನಯ್ ಗುರೂಜಿ ಎಂದೇ ಕರೀತಾರೆ. ಈ ಮಹಾನುಭಾವನ ಪಾದದಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಹಾಲಿ ಸಿಎಂ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ, ಸ್ಪೀಕರ್ ರಮೇಶ್ ಕುಮಾರ್, ಚಿತ್ರನಟ ದುನಿಯಾ ವಿಜಿ ಹೀಗೆ ಅನೇಕ ಪ್ರಖ್ಯಾತರು ಧನ್ಯತಾಭಾವ ಅನುಭವಿಸಿದ್ದಾರೆ. ಒಂದು ಲೆಕ್ಕಕ್ಕೆ ಇವರು ಸೆಲಬ್ರಿಟಿಗಳ ಸ್ವಾಮೀಜಿ.
"
ಇವರ ಹೆಸರು ವಿನಯ್. ಭಕ್ತರು ಇವರನ್ನು ಕರೆಯೋದು ವಿನಯ್ ಗುರೂಜಿ ಅಂತಾನೇ. ಇವರು ಹೇಳೋದೆಲ್ಲ ಸತ್ಯವಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಆ ನಂಬಿಕೆಯಿಂದಾಗಿಯೇ ಇವರು ಇರುವ ಜಾಗಕ್ಕೇ ಹೋಗಿ, ಮಾಜಿ ಪ್ರಧಾನಿಯೇ ಪಾದ ಪೂಜೆ ಮಾಡ್ತಾರೆ. ಸ್ಪೀಕರ್ ರಮೇಶ್ ಕುಮಾರ್ರಂತಹವರು, ತಮ್ಮ ಮಗನಿಗಿಂತಲೂ ಕಿರಿಯ ವಯಸ್ಸಿನವರಾದ ಇವರ ಪಾದಪೂಜೆ ಮಾಡುತ್ತಾರೆ.
ವಿನಯ್ ಗುರೂಜಿ ಎಂಬ ಈ ಯುವಕನ ವಯಸ್ಸು ಈಗಿನ್ನೂ 27. ಸಾಮಾನ್ಯವಾಗಿ ಗುರೂಜಿ, ಸ್ವಾಮೀಜಿ ಎಂದರೆ, ಅವರಿಗೇ ಎಂದು ಒಂದು ವೇಷಭೂಷಣ ಇರುತ್ತೆ. ಮೈತುಂಬಾ ಕಾವಿ ತೊಡುವುದು ಅತ್ಯಂತ ಸಹಜ. ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಗಂಧ, ನಾಮಗಳ ಸಮ್ಮಿಶ್ರಣವಾಗಿರ್ತಾರೆ. ಆದರೆ, ಈ ವಿನಯ್ ಗುರೂಜಿ ಹಾಗಲ್ಲ. ಸೀದಾ ಸಾದಾ ಬಟ್ಟೆ. ಜುಬ್ಬಾ ಪಾಯಿಜಾಮ, ಪ್ಯಾಂಟ್ ಷರ್ಟು ಧರಿಸಿಕೊಂಡು ಓಡಾಡುವ ಸರಳಾತಿಸರಳ ವ್ಯಕ್ತಿ ಈ ವಿನಯ್ ಗುರೂಜಿ.
ವಿನಯ್ ಗುರೂಜಿ ಇರೋದು ಚಿಕ್ಕಮಗಳೂರಿನಲ್ಲಿ. ಅಲ್ಲಿ ಗೌರಿಗದ್ದೆ ಅನ್ನೋ ಆಶ್ರಮ ಇದೆ. ಉಪನ್ಯಾಸಕರಾಗಿದ್ದ ವಿನಯ್ ಗುರೂಜಿ, ವಿದೇಶಕ್ಕೆ ಹೋಗುವ ಕನಸು ಕಂಡಿದ್ದವರು. ವೀಸಾ ಸಿದ್ಧಪಡಿಸಿಕೊಳ್ಳುತ್ತಿದ್ದ ಹೊತ್ತಿನಲ್ಲಿ ಅಂದರೆ, 2010ರಲ್ಲಿ ವಿನಯ್ಗೆ ದತ್ತಾತ್ರೇಯ ಸ್ವಾಮಿಗಳ ದರ್ಶನವಾಯ್ತಂತೆ. ಅದಾದ ಮೇಲೆ ವಿದೇಶದ ಆಸೆ ಬಿಟ್ಟ ವಿನಯ್ ಗುರೂಜಿ, ಗೌರಿಗದ್ದೆಯಲ್ಲೇ ನೆಲೆ ನಿಂತುಬಿಟ್ಟರು.
ಇವರ ಭಕ್ತರ ಪಟ್ಟಿಯಲ್ಲಿರೋ ದೊಡ್ಡದೊಡ್ಡವರ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾಗೋದು ನಿಜ.ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ.. ಅವರ ವಯಸ್ಸು 85. ರಾಜ್ಯ ರಾಜಕೀಯದ ಧುರೀಣರಷ್ಟೇ ಅಲ್ಲ, ರಾಷ್ಟ್ರೀಯ ಮಟ್ಟದ ರಾಜಕೀಯ ಧುರೀಣರೂ ಕೂಡಾ ಇವರಿಗೆ ತಲೆ ಬಾಗಿ ವಂದಿಸ್ತಾರೆ. ನಮ್ಮ ಸಿಎಂ ಕುಮಾರಸ್ವಾಮಿ ಕೂಡಾ ಅಷ್ಟೆ. ಅವರಿಗೂ ವಯಸ್ಸು 58 ವರ್ಷ. ರಾಜ್ಯ ರಾಜಕೀಯದಲ್ಲಿ ಅವರಿಗಿಂತ ಕಿರಿಯರು ಇವರ ಕಾಲಿಗೆ ನಮಸ್ಕಾರ ಮಾಡ್ತಾರೆ. ಕುಮಾರಸ್ವಾಮಿಯವರ ಮಗ ನಿಖಿಲ್ ಗೌಡರ ವಯಸ್ಸು 28 ವರ್ಷ. ಹಾಗೆ ನೋಡಿದರೆ, ಕುಮಾರಸ್ವಾಮಿಯವರ ಮಗನಿಗಿಂತ ವಿನಯ್ ಗುರೂಜಿ ಒಂದು ವರ್ಷ ಚಿಕ್ಕವರು. ಆದರೆ, ಕುಮಾರಸ್ವಾಮಿ, ಅವರ ಅಣ್ಣ ಹೆಚ್.ಡಿ. ರೇವಣ್ಣ ಕೂಡಾ ಈ ವಿನಯ್ ಗುರೂಜಿಯ ಕಾಲಿಗೆ ಪೂಜೆ ಮಾಡ್ತಾರೆ.
ರಾಜ್ಯ ರಾಜಕೀಯದ ದಿ ಮೋಸ್ಟ್ ಪವರ್ಫುಲ್ ಲೀಡರ್ ಡಿ.ಕೆ.ಶಿವಕುಮಾರ್ ಕೂಡಾ ಅಷ್ಟೆ. ಅವರೂ ಈ ವಿನಯ್ ಗುರೂಜಿಯ ಭಕ್ತರಂತೆ. ಇಡೀ ರಾಜ್ಯ ರಾಜಕಾರಣದ ಪ್ರತಿಯೊಬ್ಬರೂ ಗೌರವಿಸುವ ವ್ಯಕ್ತಿತ್ವ ರಮೇಶ್ ಕುಮಾರ್ ಅವರದ್ದು. ವಯಸ್ಸು, ಅನುಭವ, ಮುತ್ಸದ್ಧಿತನದಲ್ಲಿ ರಮೇಶ್ ಕುಮಾರ್, ರಾಜಕಾರಣಿಗಿಂತ ಒಂದು ಮಟ್ಟ ಮೇಲಿದ್ದಾರೆ. ಅವರೂ ಕೂಡಾ ಈ ವಿನಯ್ ಗುರೂಜಿಯ ಪಾದ ಪೂಜೆ ಮಾಡ್ತಾರೆ.
ಇನ್ನು ನಿಮಗೆ ಮಾಸ್ತಿಗುಡಿ ಚಿತ್ರದ ವೇಳೆ ಸಂಭವಿಸಿದ ದುರಂತ ನೆನಪಿದೆಯಲ್ಲವೇ. ಆ ದಿನ ಅಪಾಯ ಸಂಭವಿಸಲಿದೆ ಎಂದು ಮೊದಲೇ ಎಚ್ಚರಿಕೆ ಕೊಟ್ಟಿದ್ದವರು ವಿನಯ್ ಗುರೂಜಿ. ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಅವರಿದ್ದಿದ್ದರೆ, ಅಪಾಯ ಸಂಭವಿಸುತ್ತಲೇ ಇರಲಿಲ್ಲ ಎನ್ನುವುದು ಇವತ್ತಿಗೂ ದುನಿಯಾ ವಿಜಯ್ ನಂಬಿಕೆ. ಆ ದುರಂತದಲ್ಲಿ ಅನಿಲ್ ಮತ್ತು ಉದಯ್ ಎಂಬ ಇಬ್ಬರು ಉದಯೋನ್ಮುಖ ಕಲಾವಿದರು ದುರಂತ ಸಾವನ್ನಪ್ಪಿದ್ದರು. ಹಿಂದಿನ ದಿನ ಶೂಟಿಂಗ್ ಸ್ಥಳದಲ್ಲಿದ್ದ ವಿನಯ್ ಗುರೂಜಿ, ಆ ದಿನ ಘಟನೆ ನಡೆದ ವೇಳೆಯಲ್ಲಿ ಇರಲಿಲ್ಲ. ತಾನು ಬಚಾವ್ ಆಗಿದ್ದು ಅವರಿಂದಲೇ ಎಂದು ಇವತ್ತಿಗೂ ನಂಬುತ್ತಾರೆ ದುನಿಯಾ ವಿಜಯ್.
ಅವರ ನಂಬಿಕೆ ಅವರಿಗೆ. ಆದರೆ, ಆ ನಂಬಿಕೆಯ ನಡುವೆಯೂ, ಒಂದಿಷ್ಟು ವಿಭಿನ್ನವಾದ, ಗಾಂಧಿ ವಿಚಾರಧಾರೆಯನ್ನಿಟ್ಟುಕೊಂಡು ಭವಿಷ್ಯ ಹೇಳುವ ಈ ಸ್ವಾಮೀಜಿ, ವಿಭಿನ್ನವಾಗಿ ನಿಲ್ಲುತ್ತಾರೆ.