* ಅರಬ್ಬಿ ಸಮುದ್ರದ ನೀರಿನಿಂದ ಲವಣಾಂಶ ಬೇರ್ಪಡಿಸಿ ಪೂರೈಸಲು ಕೆಎಸ್‌'ಐಐಡಿಸಿ ಪ್ರಸ್ತಾವ* ಬಜೆಟ್‌'ನಲ್ಲಿ ಒಪ್ಪಿಗೆ ನೀಡಿದರೆ ಒಂದೇ ವರ್ಷದಲ್ಲಿ ನೀರು ಪೂರೈಕೆ ಆರಂಭ: ಧನಂಜಯ* ಚೆನ್ನೈನಲ್ಲಿ ಯಶಸ್ವಿ ಯಾಗಿರುವ ಯೋಜನೆ ರಾಜ್ಯದಲ್ಲೂ ಅಳವಡಿಕೆ* ಯೋಜನೆ ಅನುಷ್ಠಾನಕ್ಕೆ ಸ್ಪೇನ್‌, ಇಸ್ರೇಲ್‌ ಆಸಕ್ತಿ

ಬೆಂಗಳೂರು(ಮಾ. 02): ಅರಬ್ಬಿ ಸಮುದ್ರದ ನೀರಿನಿಂದ ಲವಣಾಂಶವನ್ನು ಪ್ರತ್ಯೇಕಿಸಿ ಕುಡಿಯಲು ಯೋಗ್ಯವಾಗುವಂತೆ ಶುದ್ಧೀಕರಿಸಿ ಮಂಗಳೂರು ಮತ್ತು ಬೆಂಗಳೂರು ನಗರಗಳಿಗೆ ಪೂರೈಸಲು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಸಿದ್ಧವಾಗಿದ್ದು, ಸರ್ಕಾರ ಸಮ್ಮತಿಸಿದಲ್ಲಿ ಒಂದು ವರ್ಷದ ಅವಧಿಯಲ್ಲೇ ಈ ಯೋಜನೆ ಪೂರ್ಣಗೊಳಿಸುವ ವಿಶ್ವಾಸ ಹೊಂದಿದೆ. ಈ ಬಗ್ಗೆ ಹಾಲಿ ಬಜೆಟ್‌ನಲ್ಲಿ ಯೋಜನೆ ಘೋಷಿಸುವಂತೆ ಸಿಎಂಗೆ ಪ್ರಸ್ತಾಪನೆ ಸಲ್ಲಿಸಿರುವುದಾಗಿ ಕೆಎಸ್‌ಐಐಡಿಸಿ ಅಧ್ಯಕ್ಷ ಸಿ.ಎಂ.ಧನಂಜಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದು, ಒಟ್ಟು 100 ಎಂಎಲ್‌ಡಿ ನೀರನ್ನು ಶುದ್ಧೀಕರಿಸುವ ಯೋಜನೆ ರೂಪಿಸಲಾಗಿದೆ. ಚೆನ್ನೈ ನಗರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಇಲ್ಲೂ ಯೋಜನೆ ರೂಪಿಸಲಾಗುವುದು. ಮಂಗಳೂರಿಗೆ ಕೂಡ ನೀರನ್ನು ನೀಡಿ ಬೆಂಗಳೂರಿಗೆ ಪೈಪ್‌ಲೈನ್‌ ಮೂಲಕ ತರುವ ಯೋಜನೆ ಇದ್ದು, ಸ್ಪೇನ್‌ ಮತ್ತು ಇಸ್ರೇಲ್‌ ಯೋಜನೆ ಅನುಷ್ಠಾನಕ್ಕೆ ಆಸಕ್ತವಾಗಿವೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಮೆಕಾನ್‌'ಗೆ ಯೋಜನೆಯ ವಿವರವಾದ ವರದಿ (ಡಿಪಿಆರ್‌) ತಯಾರಿಕೆಗೆ ರು.50 ಲಕ್ಷ ನೀಡಲಾಗಿದೆ. ತಮಿಳುನಾಡಿನಲ್ಲಿ ಯೋಜನೆ ಅನುಷ್ಠಾನಕ್ಕೆ ರು.60 ಕೋಟಿ ವೆಚ್ಚವಾಗಿದ್ದು, ರಾಜ್ಯದಲ್ಲಿ ರು.1000 ಕೋಟಿ ಖರ್ಚು ತಗಲುವ ಅಂದಾಜಿದೆ ಎಂದರು. ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಕುರಿತಂತೆ ಈಗಾಗಲೇ ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಮತ್ತಿತರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ಪೇನ್‌ ಮತ್ತು ಇಸ್ರೇಲ್‌ ಪ್ರತಿನಿಧಿಗಳು ಈಗಾಗಲೇ ಕೆಎಸ್‌ಐಐಡಿಸಿಯನ್ನು ಸಂಪರ್ಕಿಸಿದ್ದು, ಮಾತುಕತೆಗಳು ನಡೆಯುತ್ತಿವೆ. ಕೆಲವೊಂದು ಬೃಹತ್‌ ರಿಯಲ್‌ ಎಸ್ಟೇಟ್‌ ಕಂಪನಿಗಳು ಯೋಜನೆಯಲ್ಲಿ ಪಾಲು ದಾರರಾಗಲು ಅಥವಾ ಹಣಕಾಸು ನೆರವು ನೀಡಲು ಮುಂದಾಗಿದ್ದು, ಸರ್ಕಾರ ಒಪ್ಪಿಗೆ ಸೂಚಿಸಿದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕೆಎಸ್‌ಐಐಡಿಸಿ ಬದ್ಧವಾಗಿದೆ ಎಂದು ಹೇಳಿದರು.

(ಕನ್ನಡಪ್ರಭ ವಾರ್ತೆ)