ಭ್ರಷ್ಟಾಚಾರ ಮುಕ್ತ ಚುನಾವಣೆಗೆ ಸುಪ್ರೀಂಕೋರ್ಟ್ ಮತ್ತೊಂದು ಮಹತ್ವದ ಹೆಜ್ಜೆ

First Published 17, Feb 2018, 9:10 AM IST
SC says Election candidates Family Members will have to Declare source of Income
Highlights

ಭ್ರಷ್ಟಾಚಾರ ಮುಕ್ತ ಚುನಾವಣೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್, ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆದಾಯದ ಮೂಲವನ್ನು ಬಹಿರಂಗ ಪಡಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ.

ನವದೆಹಲಿ: ಭ್ರಷ್ಟಾಚಾರ ಮುಕ್ತ ಚುನಾವಣೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್, ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆದಾಯದ ಮೂಲವನ್ನು ಬಹಿರಂಗ ಪಡಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ನೀಡಿರುವ ಈ ಮಹತ್ವದ ತೀರ್ಪನ್ನು ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಜೆಡಿಯು, ಎಡಪಕ್ಷಗಳು ಸ್ವಾಗತಿಸಿವೆ. ಇದು ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಮತ್ತಷ್ಟು ಪಾರ ದರ್ಶಕಗೊಳಿಸಲಿದೆ ಎಂದು ಅವು ವಿಶ್ವಾಸ ವ್ಯಕ್ತಪಡಿಸಿವೆ.

ಪ್ರಕರಣ ಹಿನ್ನೆಲೆ: ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಮಾತ್ರ ಘೋಷಿಸಿಕೊಳ್ಳುತ್ತಾರೆ. ಆದರೆ ಆದಾಯದ ಮೂಲವನ್ನು ಬಹಿರಂಗಪಡಿಸುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ವೇಳೆ ಹೊಸದೊಂದು ಕಾಲಂ ಅಳವಡಿಸಿ, ಅದರಲ್ಲಿ ಆದಾಯದ ಮೂಲ ಬಹಿರಂಗ ಮಾಡುವಂತೆ ಸೂಚಿಸಬೇಕು ಎಂದು ಲೋಕ ಪ್ರಹರಿ ಎಂಬ ಸರ್ಕಾರೇತರ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಸುಪ್ರೀಂ ಹೇಳಿದ್ದೇನು?: ಲೋಕಪ್ರಹರಿ ಸಂಸ್ಥೆಯ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಚಲಮೇಶ್ವರ್ ನೇತೃತ್ವದ ಪೀಠ, ಎಲ್ಲಾ ಅಭ್ಯರ್ಥಿಗಳು ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿಯ ಮಾಹಿತಿ ನೀಡುವುದರ ಜೊತೆಗೆ ಆದಾಯದ ಮೂಲವನ್ನು ಬಹಿರಂಗ ಮಾಡಬೇಕು. ಅಭ್ಯರ್ಥಿ ಮಾತ್ರವಲ್ಲದೇ ಅವರ ಪತಿ/ಪತ್ನಿ ಮತ್ತು ಜೊತೆಗಿರುವ ಮಕ್ಕಳ ಆದಾಯದ ಮೂಲ ಬಹಿರಂಗಪಡಿಸುವುದು ಕಡ್ಡಾಯ ಎಂದು ತೀರ್ಪು ನೀಡಿದೆ.

ಇದೇ ಪ್ರಕರಣದ ವಿಚಾರಣೆ ವೇಳೆ ಈ ಹಿಂದೆ, ಜನಪ್ರತಿನಿಧಿಗಳಾಗಿದ್ದ ಅವಧಿಯಲ್ಲಿ ಕೆಲ ರಾಜಕೀಯ ನಾಯಕರ ಆಸ್ತಿ ಕೇವಲ 5 ವರ್ಷದಲ್ಲಿ ಶೇ.500 ಪಟ್ಟಿನವರೆಗೂ ಹೆಚ್ಚಳವಾಗಿದೆ. ಇದು ಆಘಾತ ಕಾರಿಯಾಗಿದೆ. ಈ ಬಗ್ಗೆ ಸೂಕ್ತ ತನಿಖೆಯ ಅಗತ್ಯವಿದೆ. ಇಂಥ ಆದಾಯದ ಮೂಲವಾದರೂ ಏನು, ಇದನ್ನು ಅಕ್ರಮ ಮಾರ್ಗದಲ್ಲಿ ಸಂಪಾದಿಸಲಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ. ಹೀಗೆ ಭಾರೀ ಪ್ರಮಾಣದಲ್ಲಿ ಆಸ್ತಿ ಏರಿಕೆಯಾದ ರಾಜಕಾರಣಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಮಗ್ರ ವರದಿ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು.

loader