ರಾಜ್ಯ ಬಿಜೆಪಿಯ ಹಿರಿಯ ನಾಯಕರ ನಡುವಿನ ಆಂತರಿಕ ತಿಕ್ಕಾಟ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಕುತ್ತಿರುವ ಪಟ್ಟುಗಳಿಂದ ತುಸು ನಿರಾಸೆ ಹೊಂದಿದ್ದ ರಾಜ್ಯ ಬಿಜೆಪಿಯ ಸಹಸ್ರಾರು ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರದಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏನಾದರೂ ಮೋಡಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು(ಆ.11): ರಾಜ್ಯ ಬಿಜೆಪಿಯ ಹಿರಿಯ ನಾಯಕರ ನಡುವಿನ ಆಂತರಿಕ ತಿಕ್ಕಾಟ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಾಕುತ್ತಿರುವ ಪಟ್ಟುಗಳಿಂದ ತುಸು ನಿರಾಸೆ ಹೊಂದಿದ್ದ ರಾಜ್ಯ ಬಿಜೆಪಿಯ ಸಹಸ್ರಾರು ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರದಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏನಾದರೂ ಮೋಡಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯ ಚಾಣಕ್ಯ ಎಂದೇ ಕರೆಯಲ್ಪಡುತ್ತಿರುವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದ ನಂತರ ಪಕ್ಷದಲ್ಲಿ ಎಲ್ಲವೂ ಸರಿ ಹೋಗಬಹುದು. ಇರುವ ಎಲ್ಲ ಬಿಕ್ಕಟ್ಟುಗಳೂ ಪರಿಹಾರವಾಗಿ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಬಹುದು ಎಂಬ ಆಸೆಗಣ್ಣಿನಿಂದ ಅಸಂಖ್ಯಾತ ಕಾರ್ಯಕರ್ತರು ನೋಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟ ಮುಗಿಲು ಮುಟ್ಟಿತ್ತು.
ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ್ದ ಭಿನ್ನಾಭಿಪ್ರಾಯ ಅಂತಿಮವಾಗಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವೆ ಬಹಿರಂಗವಾಗಿಯೇ ವಾಕ್ಸಮರ ನಡೆಯುವ ಹಂತಕ್ಕೆ ತಲುಪಿತು. ಒಂದು ರೀತಿಯಲ್ಲಿ ಪಕ್ಷದಲ್ಲಿ ಬಿರುಕು ಮೂಡಿದಂತಾಯಿತು. ಏನು ಮಾಡಿದರೂ ಉಭಯ ನಾಯಕರ ನಡುವಿನ ಸಮರ ನಿಲ್ಲದಿದ್ದಾಗ ಅನಿವಾರ್ಯವಾಗಿ ಅಮಿತ್ ಶಾ ಅವರೇ ಉಭಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ರಾಜಿ ಸಂಧಾನ ನಡೆಸಬೇಕಾಯಿತು.
ರಾಜಿ ಸಂಧಾನ ನಡೆದ ನಂತರವೂ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಹೋಗಿಲ್ಲ. ಮೇಲ್ನೋಟಕ್ಕೆ ಕೈಕೈ ಹಿಡಿದು ಪೋಸು ನೀಡುತ್ತಿದ್ದಾರೆಯೇ ಹೊರತು ಪಕ್ಷ ಸಂಘಟನೆಗೆ ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಏಟಿಗೆ ಎದಿರೇಟು ನೀಡಲು ಸಾಧ್ಯವಾಗಲಿಲ್ಲ.
ಈ ಬೆಳವಣಿಗೆಗಳಿಂದಾಗಿ ರಾಜ್ಯ ಬಿಜೆಪಿಯಲ್ಲಿ ಒಂದು ರೀತಿಯ ಮಂಕು ಕವಿದಂತಾಗಿತ್ತು. ಅಂತಿಮವಾಗಿ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದರೆ ಎಲ್ಲವೂ ಸರಿಯಾಗುತ್ತತೆ ಎಂಬ ಮಾತನ್ನೇ ಎಲ್ಲ ಮುಖಂಡರೂ ಹೇಳುತ್ತಿದ್ದರು. ಆ ಕಾಲ ಇದೀಗ ಬಂದಿದೆ. ಅಮಿತ್ ಶಾ ಅವರು ಯಾವ ಮೋಡಿ ಮಾಡುವ ಮೂಲಕ ರಾಜ್ಯ ಬಿಜೆಪಿಯನ್ನು ಸರಿದಾರಿಗೆ ತರುತ್ತಾರೆ ಎಂಬುದನ್ನು ಕಾದು ನೋಡಬೇಕು.
