ಡಿಕೆಶಿಗೆ ಮತ್ತೆ ಸತೀಶ್‌ ಪರೋಕ್ಷ ಎಚ್ಚರಿಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Sep 2018, 9:09 AM IST
Satish Jarkiholi Warning To DK Shivakumar
Highlights

ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಹೇಗೆ ರಾಜಕಾರಣ ಮಾಡಬೇಕೆಂಬುದು ನಮಗೆ ಗೊತ್ತಿದೆ. ಇದನ್ನೇ ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ’ ಎಂದೂ ಅವರು ಪರೋಕ್ಷವಾಗಿ  ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸತೀಶ್ ಜಾರಕಿಹೊಳಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೆಂಗಳೂರು :  ಬೆಳಗಾವಿ ರಾಜಕಾರಣದಲ್ಲಿ ಸ್ವಲ್ಪ ಸಮಸ್ಯೆ ಇದೆ. ಇದನ್ನು ಬಗೆಹರಿಸಿಕೊಳ್ಳುವ ಶಕ್ತಿಯೂ ನಮಗಿದೆ. ಈ ಬಗ್ಗೆ ನಮ್ಮ ಸಹೋದರರೊಂದಿಗೆ ಮಾತನಾಡುತ್ತೇನೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

‘ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಹೇಗೆ ರಾಜಕಾರಣ ಮಾಡಬೇಕೆಂಬುದು ನಮಗೆ ಗೊತ್ತಿದೆ. ಇದನ್ನೇ ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ’ ಎಂದೂ ಅವರು ಪರೋಕ್ಷವಾಗಿ ಮತ್ತೊಮ್ಮೆ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಲ್ಲಿ ಸಮಸ್ಯೆ ಇರುವುದು ನಿಜ. ಅದೇ ರೀತಿ ನನ್ನ ಮತ್ತು ರಮೇಶ್‌ ಜಾರಕಿಹೊಳಿ ನಡುವೆಯೂ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ, ನಾವಿಬ್ಬರೂ ಒಂದಾಗಿಯೇ ಇದ್ದೇವೆ. ವಾಲ್ಮೀಕಿ ಸಮುದಾಯದ ವಿಚಾರ ಹಾಗೂ ಬೆಳಗಾವಿ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿಯೇ ಇರುತ್ತೇವೆ. ಬೆಳಗಾವಿ ರಾಜಕೀಯ ಹಾಗೂ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಹೋದರರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರದಲ್ಲಿ ನಮಗೆ ಮುಖಭಂಗವೇನೂ ಆಗಿಲ್ಲ. 14 ಸ್ಥಾನಗಳಲ್ಲಿ 13ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದೇವೆ. ನಿರೀಕ್ಷೆಯಂತೆ ಅಧ್ಯಕ್ಷ ಸ್ಥಾನವೂ ನಮ್ಮದೇ ಆಗಿದೆ. ನಾವು ಅಂದುಕೊಂಡಂತೆಯೇ ಎಲ್ಲವೂ ಆಗಿದೆ. ಹಿಂದೆ ಬಹಳಷ್ಟುಗೊಂದಲವಿತ್ತು. ಘರ್ಷಣೆಯಾಗಿದ್ದು ನಿಜ, ಆ ನಂತರ ಗೊಂದಲ ಬಗೆಹರಿದಿದ್ದು ನಿಜ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವರ್ಗಾವಣೆ ವಿಚಾರದಲ್ಲಿ ನಾನು ಮೂಗು ತೂರಿಸಿಲ್ಲ. ಈ ವಿಚಾರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಪದಲ್ಲಿ ಸತ್ಯವಿಲ್ಲ ಎಂದು ತಿರುಗೇಟು ನೀಡಿದರು.

10 ವರ್ಷದಲ್ಲಿ ಸಿಎಂ ಆಗಬೇಕು:

ಸತೀಶ್‌ ಮುಖ್ಯಮಂತ್ರಿಯಾಗಬೇಕೆಂದು ಸಹೋದರ ರಮೇಶ್‌ ಜಾರಕಿಹೊಳಿ ನೀಡಿದ ಹೇಳಿಕೆ ಕುರಿತ ಪ್ರಶ್ನೆಗೆ, ನಾನು ಮುಖ್ಯಮಂತ್ರಿ ಯಾಕಾಗಬಾರದು? ಇನ್ನು 10 ವರ್ಷಗಳಲ್ಲಿ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯಿದೆ ಎಂದು ಹೇಳಿದರು.

ಶ್ರೀರಾಮುಲು ಸೇರಿದಂತೆ ಬಿಜೆಪಿಯ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾನಾಗಿಯೂ ಯಾರ ಜೊತೆಯೂ ಮಾತನಾಡಿಲ್ಲ. ಸಹೋದರ ರಮೇಶ್‌ ಜಾರಕಿಹೊಳಿ ಮಾತನಾಡಿದ್ದಾರೆಯೇ ಎನ್ನುವುದೂ ಗೊತ್ತಿಲ್ಲ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಲೋಕಸಭಾ ಚುನಾವಣೆಗೆ ನಾನಂತೂ ಸ್ಪರ್ಧಿಸುವುದಿಲ್ಲ. ನನಗೆ ರಾಜ್ಯ ರಾಜಕಾರಣವೇ ಸಾಕು. ಆದರೆ, ಲೋಕಸಭಾ ಚುನಾವಣೆಗೆ ಮೂವರ ಹೆಸರನ್ನು ಕೊಟ್ಟಿರೋದು ನಿಜ. ನನ್ನ, ರಮೇಶ್‌ ಜಾರಕಿಹೊಳಿ ಮತ್ತು ವಿವೇಕ್‌ ರಾವ್‌ ಪಾಟೀಲ್‌ ಹೆಸರಿದೆ. ಆದರೆ ಅಲ್ಲಿಗೆ ಹೋಗೋಕೆ ನನಗೆ ಇಷ್ಟವಿಲ್ಲ. ಈಗ ಒಂದು ಸೀಟು ಗೆಲ್ಲಿಸಿ ಕಳಿಸಿದ್ದೆವು. ಮುಂದೆ ಜಿಲ್ಲೆಯಿಂದ ಎರಡು ಸೀಟು ಗೆಲ್ಲಿಸಿ ಕಳಿಸ್ತೇವೆ ಎಂದರು.

ಪಕ್ಷದಲ್ಲಿ ಸತೀಶ್‌ ಜಾರಕಿಹೊಳಿ ಅವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ರಮೇಶ್‌ ಜಾರಕಿಹೊಳಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಹಾಗೇನೂ ಆಗಿಲ್ಲ. ಎರಡು ವರ್ಷಗಳ ನಂತರ ಸಚಿವ ಸ್ಥಾನ ನೀಡ್ತಾರೆ. ಈಗಾಗಲೇ ಭರವಸೆಯನ್ನು ಹಿರಿಯ ನಾಯಕರು ಕೊಟ್ಟಿದ್ದಾರೆ. ಎಐಸಿಸಿ ಕಾರ್ಯದರ್ಶಿ ಸ್ಥಾನವನ್ನೂ ನೀಡಿದ್ದಾರೆ. ಕೆಲವೊಂದು ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿರೋದು ನಿಜ ಎಂದರು.

loader