ವೇದಾವತಿ ನದಿಪಾತ್ರ ವಾಣಿ ವಿಲಾಸ ಸಾಗರ ಜಲಾಶಯದಿಂದ ಆರಂಭಗೊಂಡರೂ ದಂಧೆಯ ಭರಾಟೆ ಪಿಟ್ಲಾಲಿ ಗ್ರಾಮದ ಆಸುಪಾಸಿನಿಂದ ಶುರುವಾಗುತ್ತದೆ. ಅಲ್ಲಿಂದ ಮುಂದುವರಿದು ಕಸವನ ಹಳ್ಳಿ, ಹಳೇ ಯಳನಾಡು ದಾಟಿಕೊಂಡು ಶಿಡ್ಲಯ್ಯಕೊಟ್ಟ ಸಮೀಪಿಸುವ ಹೊತ್ತಿಗೆ ಮರಳು ದಂಧೆಯು ಬೇರೆಯದೇ ಆದ ಸ್ಪರೂಪ ಪಡೆದುಕೊಳ್ಳುತ್ತದೆ.
ಚಿತ್ರದುರ್ಗ (ನ.24): ಕಳೆದ ಏಳೆಂಟು ವರ್ಷಗಳ ಹಿಂದೆ ಆರಂಭಗೊಂಡ ಅಕ್ರಮ ಮರಳು ದಂಧೆ ಹಿರಿಯೂರು ತಾಲೂಕಿನ ಎರಡು ಜೀವನದಿಗಳ ಒಡಲನ್ನು ಬಗೆದು ಬರಿದಾಗಿಸಿ ಬೊಬ್ಬೆ ಹಾಕುತ್ತಿವೆ. ಕಣ್ಮುಚ್ಚಿ ತೂಕಡಿಸುತ್ತ ಕುಳಿತಿರುವ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಪೊಲೀಸ್ ಇಲಾಖೆಗಳು ಬೆಕ್ಕಿಗೆ ಗಂಟೆ ಕಟ್ಟುವವರಾರು? ಎಂಬ ಧೋರಣೆ ತಾಳಿವೆ.
ಕುಂದಲಗುರದಿಂದ ಶುರುವಾಗುವ ಸುವರ್ಣಮುಖಿ ನದಿಪಾತ್ರ ಕೂಡ್ಲಹಳ್ಳಿಗೆ ಕೊನೆಯಾಗುತ್ತದೆ. ಮರಳು ಮಾಫಿಯಾಗೆ ಈ ನದಿಪಾತ್ರ ಆಯಕಟ್ಟಿನ ತಾಣ. ತಾಲೂಕಿನ ಗಡಿಗ್ರಾಮಗಳಾದ ಕುಂದಲಗುರದಿಂದ ನೇರ ಜೆಜಿಹಳ್ಳಿ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿ- 4ಅನ್ನು ತಲುಪಲು ಸಾಲು ಸಾಲು ಟ್ರ್ಯಾಕ್ಟರ್, ಲಾರಿಗಳು ಮೆರವಣಿಗೆ ಹೊರಡುತ್ತವೆ. ಇದೇ ನದಿ ಪಾತ್ರದ ಮ್ಯಾದನಹೊಳೆ, ಸಮುದ್ರದ ಹಳ್ಳಿ, ಹೂವಿನಹೊಳೆ ಗ್ರಾಮಗಳ ನದಿ ಪಾತ್ರದಿಂದ ಹಿರಿಯೂರು, ಸಿರಾ, ಬೆಂಗಳೂರು ಹಾಗೂ ಹೊರರಾಜ್ಯಗಳಿಗೆ ಮರಳು ರವಾನೆಯಾಗುತ್ತಿದೆ.
ವೇದಾವತಿ ನದಿಪಾತ್ರ ವಾಣಿ ವಿಲಾಸ ಸಾಗರ ಜಲಾಶಯದಿಂದ ಆರಂಭಗೊಂಡರೂ ದಂಧೆಯ ಭರಾಟೆ ಪಿಟ್ಲಾಲಿ ಗ್ರಾಮದ ಆಸುಪಾಸಿನಿಂದ ಶುರುವಾಗುತ್ತದೆ. ಅಲ್ಲಿಂದ ಮುಂದುವರಿದು ಕಸವನ ಹಳ್ಳಿ, ಹಳೇ ಯಳನಾಡು ದಾಟಿಕೊಂಡು ಶಿಡ್ಲಯ್ಯಕೊಟ್ಟ ಸಮೀಪಿಸುವ ಹೊತ್ತಿಗೆ ಮರಳು ದಂಧೆಯು ಬೇರೆಯದೇ ಆದ ಸ್ಪರೂಪ ಪಡೆದುಕೊಳ್ಳುತ್ತದೆ.
ಈ ಮುನ್ನ ರೈತ ಮತ್ತು ಜನಪರ ಸಂಘಟನೆಗಳ ಪ್ರತಿಭಟನೆ ಹಾಗೂ ಸ್ಥಳೀಯರ ಪ್ರತಿರೋಧದಿಂದಾಗಿ ಮರಳು ದಂಧೆ ಕೋರರಲ್ಲಿ ಅಳುಕು ಮೂಡಿಸಿತ್ತು. ವಿಪರ್ಯಾಸವೆಂದರೆ, ಈಗ ಸ್ಥಳೀಯರ ಬೆಂಬಲದೊಂದಿಗೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಹಿಂದೆ ಎರಡು ಮೂರು ಎಕರೆ ತೋಟಗಳನ್ನು ಮಾಡಿಕೊಂಡು ವರ್ಷಕ್ಕೆ ನಾಲ್ಕು ಕಾಸು ನೋಡುತ್ತಿದ್ದ ರೈತಾಪಿ ವರ್ಗದೆದುರು ಮರಳು ತುಂಬಲು ಹೋಗುವ ಕೂಲಿಕಾರರೇ ದಿನಕ್ಕೆ ಸಾವಿರ ಗಟ್ಟಲೇ ಎಣಿಸುವ ಪರಿಸ್ಥಿತಿ ಉದ್ಭವವಾಗಿದೆ.
ಅನಂತರ ಕೃಷಿಗೆ ಗುಡ್ ಬೈ ಹೇಳಿದ ಅನೇಕ ಯುವಕರು ಈಗ ಮರಳು ತುಂಬುವುದನ್ನೇ ಮುಖ್ಯ ಕಸುಬನ್ನಾಗಿಸಿ ಕೊಂಡಿರುವುದು ದಂಧೆಕೋರರಿಗೆ ಆನೆ ಬಲ ಬರಲು ಕಾರಣವಾಗಿದೆ. ಹೀಗಾಗಿ, ವೇದಾವತಿ ನದಿಪಾತ್ರದ ಶಿಡ್ಲಯ್ಯನಕೊಟ್ಟ, ಸಾಲುಹುಣಸೆ, ಹೊಸಹಳ್ಳಿ, ಕಲಮರಹಳ್ಳಿ, ಬುರುಡುಕುಂಟೆ ಆಸುಪಾಸಿನ ವೇದಾವತಿ ನದಿಪಾತ್ರವಂತೂ ರಾತ್ರಿ ಹಗಲೂ ಟ್ರ್ಯಾಕ್ಟರ್‌ಗಳು, ಲಾರಿಗಳಿಂದ ಕಿಕ್ಕಿರಿದು ಹೋಗುತ್ತದೆ.
ಈ ಸಂಬಂಧ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ, ಅರಣ್ಯ, ಪೊಲೀಸ್ ಇಲಾಖೆಗಳನ್ನು ಪ್ರಶ್ನಿಸಿದರೆ ಇದು ನಮ್ಮ ಹೊಣೆಗಾರಿಕೆಯಷ್ಟೇ ಅಲ್ಲ. ಬೇರೆ ಇಲಾಖೆಗಳು ಸುಮ್ಮನಿದ್ದರೆ ನಾವೊಬ್ಬರೇ ಏನು ತಾನೆ ಮಾಡಲಿಕ್ಕಾಗುತ್ತದೆಯೆಂಬ ಸಿದ್ಧ ಉತ್ತರ ಕೊಡಲಾಗುತ್ತದೆ. ಅಕ್ರಮ ಮರಳು ಸಾಗಣೆಗೆ ನಿಯಂತ್ರಣಕ್ಕೆ ಮುಂದಾಗಬೇಕಾದ ಇಲಾಖೆಗಳೇ ಪರಸ್ಪರರ ಮೇಲೆ ಹೊಣೆಗೇಡಿತನದ ಆರೋಪ ಹೊರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಬೆಕ್ಕಿಗೆ ಗಂಟೆ ಕಟ್ಟು ವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
