ಮಳೆ ನೀರಲ್ಲಿ ತೇಲಿದ ಸಾಗರ ?

First Published 13, Jul 2018, 3:27 PM IST
Sagara Received The Highest Rainfall
Highlights

  • ನಿರಂತರ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ಭರ್ತಿ
  • ಪಟ್ಟಣದ ಬೆಳಲಮಕ್ಕಿಯಲ್ಲಿ ಕಾಂಪೌಂಡ್ ಗೋಡೆ ಕುಸಿದು ವೃದ್ಧೆ ಸಾವು 

ಸಾಗರ(ಜು.13): ಕಳೆದ ನಾಲ್ಕೈದು ದಿನಗಳಿಂದ ಅಬ್ಬರಿಸಿ ಬೊಬ್ಬಿರಿದು ಸುರಿದ ಪುನರ್ವಸು ಮಳೆ ತಾಲೂಕಿನಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.

ಬುಧವಾರ ಹಾಗೂ ಗುರುವಾರ ಮಳೆಯ ಪ್ರಮಾಣ ಇನ್ನೂ ಜಾಸ್ತಿಯಾಗಿತ್ತು. ಜುಲೈನಲ್ಲಿ ಆಗಬೇಕಾದ ಒಟ್ಟು ವಾಡಿಕೆ ಮಳೆ ಸರಿಸುಮಾರು ಎರಡೇ ದಿನಗಳಲ್ಲಿ ಸುರಿದಿದೆ. ನಿರಂತರ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ತುಂಬಿಹರಿಯುತ್ತಿವೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಬಸವನಹೊಳೆ ತುಂಬಿ ಕೋಡಿಬಿದ್ದಿದೆ. ಇತಿಹಾಸ ಪ್ರಸಿದ್ಧ ಗಣಪತಿಕೆರೆ ಕೂಡ ಕೋಡಿ ಬಿದ್ದಿದೆ. ವರದಾನದಿ, ಹಾನಬ್ಬಿಹೊಳೆ ತುಂಬಿ ಹರಿಯುತ್ತಿದೆ.

ಮಹಿಳೆ ಸಾವು 
ಕಾಂಪೌಂಡ್ ಗೋಡೆ ಕುಸಿತದಿಂದ ಪಟ್ಟಣದ ಬೆಳಲಮಕ್ಕಿಯಲ್ಲಿ ಕಲ್ಲಮ್ಮ (65) ಗುರುವಾರ ಮೃತಪಟ್ಟಿದ್ದಾರೆ. ಮನೆ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಕಲ್ಲಮ್ಮ ಅವರ ಮೇಲೆ ಕಾಂಪೌಂಡ್ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ  ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಲಮ್ಮ ಸಾವಿಗೆ ಶಾಸಕ ಎಚ್.ಹಾಲಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಶುಕ್ರವಾರದಿಂದ ತಾಲೂಕಿನ ಬೇರೆ ಬೇರೆ ಕಡೆ ನೆರೆಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಬೀಸನಗದ್ದೆ ಜಲಾವೃತ
ನಿರಂತರ ಮಳೆಯಿಂದಾಗಿ ತಾಲೂಕಿನ ತಾಳಗುಪ್ಪ ಹೋಬಳಿಯ ಸೈದೂರು ಮತ್ತು ಕಾನ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನ್ನಹೊಳೆ, ಕಣಸೆಹೊಳೆ, ಮಾವಿನಹೊಳೆ ಹಾಗೂ ವರದಾನದಿಗಳು ಉಕ್ಕಿ ಹರಿಯುತ್ತಿದೆ. ವರದಾನದಿ ಪ್ರವಾಹದಿಂದ ಈ ಭಾಗದ ಸುಮಾರು 3 ಸಾವಿರಕ್ಕೂ ಹೆಚ್ಚು ಜಮೀನು ಜಲಾವೃತವಾಗಿದೆ. ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತಗೊಂಡು ದ್ವೀಪದಂತಾಗಿದೆ.

ಇಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿದೆ. ತಾಳಗುಪ್ಪ ಹೋಬಳಿಯ ಸೈದೂರು, ತಡಗಳಲೆ, ಬೀಸನಗದ್ದೆ, ಕೆ.ಜಿ.ಕೊಪ್ಪ, ಹಾರೆಗೊಪ್ಪ, ಮಂಡಗಳಲೆ, ಕಾನ್ಲೆ, ಕೆಲವೆ, ಹಿಂಡ್ಲೆಕೊಪ್ಪ, ಗಡೆಮನೆ ಇನ್ನಿತರೆ ಗ್ರಾಮಗಳು ನೆರೆಭೀತಿ ಎದುರಿಸುತ್ತಿದೆ. ತಾಳಗುಪ್ಪ ಸಮೀಪ ವಿಪರೀತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿಗೆ ನೀರು ನುಗ್ಗಿದೆ.

loader