ನವದೆಹಲಿ[ಜು.09]: ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ ಕುಮಾರ್‌ ಶಿಂಧೆ ಅವರಂತಹ ನಾಯಕರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಪಕ್ಷದ ಯುವಪಡೆ ಸಿಡಿದೆದ್ದಿದೆ. ರಾಹುಲ್‌ ಸ್ಥಾನವನ್ನು ಯುವ ನಾಯಕರೇ ತುಂಬಬೇಕು ಎಂಬ ಒತ್ತಡವನ್ನು ಹೇರತೊಡಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಅವರ ಆಪ್ತರೂ ಆಗಿರುವ ಸಚಿನ್‌ ಪೈಲಟ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ಖರ್ಗೆ, ಶಿಂಧೆಗೆ ಹುದ್ದೆ ತಪ್ಪುತ್ತಾ ಎಂಬ ಪ್ರಶ್ನೆಯೂ ಕೇಳಿ ಬರತೊಡಗಿದೆ.

ಒಂದಿಷ್ಟುಯುವ ಕಾಂಗ್ರೆಸ್‌ ಕಾರ್ಯಕರ್ತರು ಈಗಾಗಲೇ ರಾಹುಲ್‌ ಅವರನ್ನು ಭೇಟಿ ಮಾಡಿ, ಹಿರಿಯ ನಾಯಕರಿಗೆ ಪಟ್ಟಕಟ್ಟುವುದು ಬೇಡ ಎಂದು ಒತ್ತಡ ಹೇರಿದ್ದಾರೆ. ಅಲ್ಲದೆ, ಯುವಕರ ಜತೆ ಸಂಪರ್ಕ ಹೊಂದಿರುವ ಯುವಕರಿಗೇ ಮಣೆ ಹಾಕುವುದು ಉತ್ತಮ. ಅವರಿಗೇ ಪಕ್ಷದ ಹೊಣೆಗಾರಿಕೆ ವಹಿಸಬೇಕು. ಯಾರೇ ಕಾಂಗ್ರೆಸ್‌ ಅಧ್ಯಕ್ಷರಾದರೂ ಅವರನ್ನು ದೇಶಾದ್ಯಂತ ಜನರು ಗುರುತಿಸುವಂತಿರಬೇಕು. ಅಧ್ಯಕ್ಷರಿಂದ ದೀರ್ಘಾವಧಿ ಭವಿಷ್ಯವನ್ನು ಎದುರು ನೋಡುವಂತಿರಬೇಕು ಎಂದು ಪ್ರಬಲವಾಗಿ ವಾದ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುವಕರನ್ನು ಕಾಂಗ್ರೆಸ್‌ ಸೆಳೆಯಬೇಕು. ಯುವ ನಾಯಕರಿಗೇ ಹುದ್ದೆ ಕೊಡಬೇಕು. ಹಿರಿಯ ನಾಯಕರು ಈಗಿನ ಪೀಳಿಗೆಯ ಯುವಕರನ್ನು ಸೆಳೆಯುವುದು ಕಷ್ಟಎಂದು ವಕಾಲತ್ತು ವಹಿಸಿದ್ದಾರೆ ಎಂದು ಹೇಳಲಾಗಿದೆ.

ಇದರ ಬೆನ್ನಲ್ಲೇ ರಾಜಸ್ಥಾನದ ಹಾಲಿ ಉಪಮುಖ್ಯಮಂತ್ರಿಯಾಗಿರುವ ಸಚಿನ್‌ ಪೈಲಟ್‌ ಹಾಗೂ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಪಕ್ಷದೊಳಗೆ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

41 ವರ್ಷದ ಪೈಲಟ್‌ ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಅಲ್ಲದೆ ತಳಮಟ್ಟದ ಸಂಘಟನೆಯ ಅನುಭವ ಅವರಿಗೆ ಇದೆ. 48 ವರ್ಷದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕ್ರಿಯಾಶೀಲ ನಾಯಕರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಮಾಸ್‌ ಲೀಡರ್‌ ಆಗಿದ್ದಾರೆ ಎಂದು ವಾದಿಸಲಾಗುತ್ತಿದೆ.