ಆ್ಯಸಿಡ್ ನಿಂದ ತಯಾರಾಗುತ್ತೆ ದುಬಾರಿ ದ್ರವ್ಯ. ಈ ದ್ರವ್ಯವನ್ನು ಯಾಕೆ ಬಳಕೆ ಮಾಡುತ್ತಾರೆ ಎನ್ನುವ ವಿಚಾರವೇ ಬೆಚ್ಚಿ ಬೀಳಿಸುತ್ತದೆ. ಬೆಳಗಾವಿ ತುಂಬೆಲ್ಲಾ ಇದೀಗ ರಷ್ಯಾ ಡ್ರಗ್ ಮಾಫಿಯಾ ದಂಧೆ ವ್ಯಾಪಕವಾಗಿ ಹರಡುತ್ತಿದೆ. 

ಬೆಳಗಾವಿ : ಅಂತಾರಾಜ್ಯ ಗಡಿ ಹಾಗೂ ಸಂಪರ್ಕ ಹೊಂದಿರುವ ಬೆಳಗಾವಿ ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ನಂಟು ಬೆಳೆಸಿಕೊಂಡಿದೆ. ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರ ಇದೀಗ ಸ್ಮಗಲ್ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ. ಕೃತಕ ಮಾದಕ ದ್ರವ್ಯ ಮಾರಾಟದಲ್ಲಿ ವ್ಯಾಪಕ ಜಾಲ ಹೊಂದಿರುವ ರಷ್ಯನ್ ಡ್ರಗ್ ಮಾಫಿಯಾ ರಾಜ್ಯದಲ್ಲಿ ಇದೀಗ ಸದ್ದಿಲ್ಲದೆ ಹರಡುತ್ತಿದೆ.

ಹೊಸ ವರ್ಷಾಚರಣೆ ಪಾರ್ಟಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ರಷ್ಯನ್ ಡ್ರಗ್ ಲೈಸರ್ಜಿಕ್ ಡೈಥಲಾಮೈಡ್ (ಎಲ್‌ಎಸ್‌ಡಿ) ಎಂಬ ಭಯಾನಕ ಮಾದಕ ದ್ರವ್ಯ ಬೆಳಗಾವಿಯ ಗಡಿ ಭಾಗದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಲಗ್ಗೆ ಇಡುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ನೆರೆಯ ಗೋವಾವನ್ನು ಮುಖ್ಯ ಕೇಂದ್ರವಾಗಿ ಇಟ್ಟುಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ರಷ್ಯನ್ ಡ್ರಗ್ ಮಾಫಿಯಾ ನೆಲೆಯೂರಿತ್ತು. 

ಈ ಮೊದಲು ಕರಾವಳಿ ಹಾಗೂ ಗಡಿ ಭಾಗದ ಪ್ರದೇಶದಲ್ಲಿ ಈ ಡ್ರಗ್ಸ್ ನಿದ್ದೆಗೆಡಿಸಿತ್ತು. ಆದರೆ ಇದೀಗ ಎಲ್‌ಎಸ್‌ಡಿ ಎಂಬ ಕೃತಕ ಮಾದಕ ದ್ರವ್ಯ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ನಗರ ಹಾಗೂ ಜಿಲ್ಲೆಗೂ ಕಾಲಿಟ್ಟಿದ್ದು, ಇದೀಗ ಎಲ್ಲೆಂದರಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. 

ಪಂಚ ಜಿಲ್ಲೆಗಳಿಗೆ ಪೂರೈಕೆ: ರಷ್ಯನ್ ಡ್ರಗ್ ಲೈಸರ್ಜಿಕ್ ಡೈಥಲಾಮೈಡ್ (ಎಲ್‌ಎಸ್‌ಡಿ) ಮಾದಕವಸ್ತು ಕಳೆದ ಒಂದೂವರೆ ವರ್ಷದಿಂದ ಗೋವಾದಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ಧಾರವಾಡ ಸೇರಿದಂತೆ ಇನ್ನಿತರ ಜಿಲ್ಲೆಗಳಗೆ ಪೂರೈಕೆಯಾಗುತ್ತಿದೆ. ಆ್ಯಸಿಡ್‌ನಿಂದ ತಯಾರಿಸುವ ಎಲ್‌ಎಸ್‌ಡಿ ಮಾಫಿಯಾದ ಉತ್ಪನ್ನಗಳು ವಿದೇಶದಿಂದ ಕಳ್ಳ ಮಾರ್ಗದ ಮೂಲಕ ಗೋವಾಕ್ಕೆ ಬರುತ್ತಿವೆ. ಪೋಸ್ಟಲ್ ಸ್ಟ್ಯಾಂಪ್ ಆಕಾರದಲ್ಲಿರುವ ಎಲ್‌ಎಸ್‌ಡಿ ಮಾದಕ ದ್ರವ್ಯಕ್ಕೆ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಬಲಿಯಾಗುತ್ತಿದ್ದಾರೆ.

ಈ ಡ್ರಗ್ಸನ್ನು ದ್ವಿಚಕ್ರ ವಾಹನಗಳ ಮೂಲಕ ಗೋವಾದಿಂದ ರಾಜ್ಯದ ವಿವಿಧ ಭಾಗಗಳಿಗೆ ಪೂರೈಕೆ ಮಾಡಿ, ನಂತರ ಯುವಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಏನಿದು ಎಲ್‌ಎಸ್‌ಡಿ?: ಆ್ಯಸಿಡ್‌ನಿಂದ ತಯಾರಾಗುವ ಕೃತಕ ಮಾದಕ ದ್ರವ್ಯವಿದು. ಈ ಹಿಂದೆಯೇ ಇದಕ್ಕೆ ಇಡೀ ವಿಶ್ವದಾದ್ಯಂತ ನಿಷೇಧ ಹೇರಲಾಗಿದೆ. ಆದರೆ ಅಮೆರಿಕ ಮತ್ತು ರಷ್ಯಾದಲ್ಲಿ ಇದನ್ನು ಅಕ್ರಮವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಭಾರತದಲ್ಲಿ ರಷ್ಯಾ, ನೈಜೀರಿಯಾ, ಬಾಂಗ್ಲಾ ಪ್ರಜೆಗಳು ಈ ಮಾಫಿಯಾ ನಡೆಸುತ್ತಿದ್ದಾರೆ. ಎಲ್‌ಎಸ್‌ಡಿಯು ಕಾರ್ಟೂನ್ ಚಿತ್ರವಿರುವ ಸ್ಟ್ಯಾಂಪ್ ಕಾಗದದ ಆಕಾರದಲ್ಲಿ ಇರುತ್ತದೆ. ಇದನ್ನು ನಾಲಿಗೆಯಲ್ಲಿ ಇಟ್ಟ 15ರಿಂದ 20 ನಿಮಿಷಗಳಲ್ಲಿ ನಶೆಯೇರುತ್ತದೆ. 

ಕೇವಲ 20ರಿಂದ 30 ಮಿಲಿಗ್ರಾಂ ಸಾಕು ಮತ್ತು ಬರಲಿಕ್ಕೆ. ಈ ಮಾದಕ ಒಮ್ಮೆ ಸೇವನೆ ಮಾಡಿದಲ್ಲಿ 8ರಿಂದ 10 ಗಂಟೆಗಳ ಕಾಲ ಮನುಷ್ಯನನ್ನು ಅಮಲಿನಲ್ಲಿಡುತ್ತದೆ. ಈ ವೇಳೆ ಅವರಿಗೆ ಮನರಂಜನೆ ಇರಲೇಬೇಕು. ಇಲ್ಲವಾದಲ್ಲಿ ಕ್ರೂರವಾಗಿ ವರ್ತಿಸುತ್ತಾರೆ. ಒಂದು ವೇಳೆ ಎಲ್‌ಎಸ್‌ಡಿ ಪ್ರಮಾಣ ಹೆಚ್ಚಾದಲ್ಲಿ ಪ್ರಾಣವೇ ಹೋಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.