* ತಾಜ್'ಮಹಲ್'ನಲ್ಲಿ ನಮಾಜ್ ನಿಷೇಧಿಸಿ: ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಸಮಿತಿ ಆಗ್ರಹ* ತಾಜ್'ಮಹಲ್ ಪಾರಂಪರಿಕ ತಾಣವಾಗಿದ್ದು, ಅದು ಧಾರ್ಮಿಕ ಸ್ಥಳವಾಗಬಾರದು* ತಾಜ್'ಮಹಲ್'ನಲ್ಲಿ ನಮಾಜ್ ಮಾಡುವುದಾದರೆ ಶಿವನ ಪ್ರಾರ್ಥನೆಗೂ ಅವಕಾಶ ಕೊಡಿ* ಇತಿಹಾಸ ಸಂಕಲನ ಸಮಿತಿಯು ಆರೆಸ್ಸೆಸ್'ನ ಅಂಗಸಂಸ್ಥೆಯಾಗಿದೆ

ನವದೆಹಲಿ(ಅ. 27): ತಾಜ್'ಮಹಲ್ ನಮ್ಮ ರಾಷ್ಟ್ರೀಯ ಪಾರಂಪರಿಕ ಸ್ಥಳವಾಗಿದ್ದು, ಅಲ್ಲಿ ನಮಾಜ್ ಮಾಡಲು ಅವಕಾಶ ಕೊಡಬಾರದು ಎಂದು ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಸಮಿತಿ ಆಗ್ರಹಿಸಿದೆ. ಇಂಡಿಯಾಟುಡೇ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಸಮಿತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ್ ಪಾಂಡೆ, ತಾಜ್'ಮಹಲ್'ನಲ್ಲಿ ನಮಾಜ್ ಮಾಡುವ ಮೂಲಕ ಧಾರ್ಮಿಕ ಸ್ಥಳವನ್ನಾಗಿ ಮಾಡಲಾಗಿದೆ. ಅದು ಪಾರಂಪರಿಕ ಸ್ಥಳವಾಗಿ ಉಳಿಯಬೇಕಾದರೆ ಅಲ್ಲಿ ನಮಾಜ್'ನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಒಂದು ವೇಳೆ, ತಾಜ್'ಮಹಲ್'ನಲ್ಲಿ ನಮಾಜ್ ನಿಷೇಧಿಸಲು ಸಾಧ್ಯವಿಲ್ಲವಾದರೆ ಅಲ್ಲಿ ಹಿಂದೂಗಳಿಗೆ ಶಿವನ ಪ್ರಾರ್ಥನೆ ಮಾಡಲೂ ಅನುವು ಮಾಡಿಕೊಡಬೇಕೆಂದು ಬಾಲಮುಕುಂದ್ ಪಾಂಡೆ ಹೇಳಿದ್ದಾರೆ. ಈ ವಿಚಾರ ಈಗ ವಿವಾದಕ್ಕೆ ಗ್ರಾಸವಾಗಿದೆ. ಇಲ್ಲಿ ಪ್ರತೀ ಶುಕ್ರವಾರ ನಮಾಜ್ ನಡೆಯುತ್ತದೆ. ಆ ವಾರದಂದು ಪ್ರವಾಸಿಗರಿಗೆ ಇಲ್ಲಿ ಪ್ರವೇಶವಿರುವುದಿಲ್ಲ.

ಕೆಲ ದಿನಗಳ ಹಿಂದಷ್ಟೇ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ತಾಜ್'ಮಹಲ್'ನ ಒಳಗೆ ಶಿವ ಚಾಲಿಸ ಮಂತ್ರ ಪಠಿಸಲು ಯತ್ನಿಸಿದ್ದರು. ಅಲ್ಲಿಯ ಭದ್ರತಾ ಸಿಬ್ಬಂದಿ ಇದನ್ನು ತಡೆದಿದ್ದರು.

ಮೊಘಲರ ದೊರೆ ಶಾಜಹಾನ್ ಅವರು 17ನೇ ಶತಮಾನದಲ್ಲಿ ಆಗ್ರಾದ ಬಳಿ ತನ್ನ ಪತ್ನಿ ಮುಮ್ತಾಜ್'ಗಾಗಿ ಕಟ್ಟಿಸಿದ ಸಮಾಧಿಯೇ ತಾಜ್ ಮಹಲ್. ಈ ಆವರಣದಲ್ಲಿ ಒಂದು ಮಸೀದಿಯೂ ಇದೆ. ಆದರೆ, ಕೆಲ ಇತಿಹಾಸಕಾರರ ಪ್ರಕಾರ ತಾಜ್'ಮಹಲ್ ಹಿಂದೆ ಶಿವನ ದೇವಾಲಯವಾಗಿತ್ತೆನ್ನಲಾಗಿದೆ. ಹಿಂದೂ ದೇಗುಲವನ್ನು ಒಡೆದು ಅಲ್ಲಿ ಷಾಜಹಾನ್ ತಾಜ್'ಮಹಲ್ ನಿರ್ಮಿಸಿದ್ದರು. ಈ ಕಟ್ಟಡದಲ್ಲಿ ಈಗಲೂ ಶಿವಲಿಂಗವಿದೆ ಎಂಬ ವಾದವಿದೆ.

ತಾಜ್'ಮಹಲ್'ನಲ್ಲಿ ನಮಾಜ್ ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವ ಅಖಿಲ ಭಾರತೀಯ ಇತಿಹಾಸ ಸಂಕಲನ ಸಮಿತಿಯು ಆರೆಸ್ಸೆಸ್'ನ ಅಂಗಸಂಸ್ಥೆಯಾಗಿದೆ.

(ಮಾಹಿತಿ: ಇಂಡಿಯಾಟುಡೇ)