ಬೆಂಗಳೂರು[ಜು.21]: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತ ಪರಿಷ್ಕೃತ ದಂಡ ವಿಧಿಸಲು ಪರ್ಸನಲ್‌ ಅಸಿಸ್ಟೆಂಟ್‌ ಡಿವೈಸ್‌ (ಪಿಡಿಎ) ಅಪ್‌ಡೇಟ್‌ ಮಾಡದ ಕಾರಣ ಜು.20ರಂದು ಜಾರಿಯಾಗಬೇಕಿದ್ದ ಪರಿಷ್ಕೃತ ದರ ಕಟ್ಟು ನಿಟ್ಟಾಗಿ ಜಾರಿಯಾಗಿಲ್ಲ.

ಅತಿವೇಗದ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ನಿತರ ವಾಹನ ಚಾಲನೆ, ವಿಮೆ ಇಲ್ಲದ ವಾಹನಗಳ ಚಾಲನೆ ಹಾಗೂ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಪ್ರಕರಣಗಳ ದಂಡ ಮೊತ್ತವನ್ನು ಸರಾಸರಿ ಶೇ.60ರಷ್ಟುಹೆಚ್ಚಿಸಿ ಸರ್ಕಾರ ಜೂ.28ರಂದು ಆದೇಶ ಹೊರಡಿಸಿತ್ತು. ಪೊಲೀಸರ ಬಳಿ ಇರುವ ಪರ್ಸನಲ್‌ ಅಸಿಸ್ಟೆಂಟ್‌ ಡಿವೈಸ್‌ ಸಾಧನೆ ಮೇಲ್ದರ್ಜೆಗೇರಿಸಿ ಜು.20ರಿಂದ ಪರಿಷ್ಕೃತ ದಂಡ ವಿಧಿಸಲು ಸೂಚನೆ ನೀಡಲಾಗಿತ್ತು.

ಪೋನ್ ಬಳಕೆ: ಏನೆಲ್ಲಾ ಮಾಡಿದ್ರೆ ನಿಯಮ ಉಲ್ಲಂಘನೆ? ತಿಳಿದುಕೊಳ್ಳಿ ರೂಲ್ಸ್!

ಆದರೆ ದಂಡ ವಿಧಿಸಲು ಸಂಚಾರ ಪೊಲೀಸರು ಬಳಸುವ ಪಿಡಿಎ ಸಾಧನಗಳನ್ನು ಇದುವರೆಗೂ ಅಪ್‌ಡೇಟ್‌ ಮಾಡಿಲ್ಲ. ಇದೇ ವೇಳೆ ಕೈ ಬರಹದಲ್ಲಿ ನೀಡುವ ಚಲನ್‌ಗಳು ಕೂಡ ಹಳೆಯದೇ ಇದ್ದವು. ಹೀಗಾಗಿ, ಆದೇಶದ ಅನುಸಾರ ಪರಿಷ್ಕೃತ ದಂಡ ಶುಲ್ಕವನ್ನು ಚಲನ್‌ ಕೊಟ್ಟು ಪಡೆದುಕೊಳ್ಳುವುದೋ ಬೇಡವೋ ಎಂಬ ಗೊಂದಲಕ್ಕೆ ಸಂಚಾರ ಪೊಲೀಸರು ಸಿಲುಕಿದ್ದರು. ಹೀಗಾಗಿ, ನಗರದ ಬಹುತೇಕ ಭಾಗಗಳಲ್ಲಿ ಪರಿಷ್ಕೃತ ದಂಡ ಶುಲ್ಕ ಸಂಗ್ರಹ ಜಾರಿಯಾಗಲಿಲ್ಲ. ಪೊಲೀಸರು, ಹಿಂದಿನ ನಿಯಮದಂತೆ ದಂಡವನ್ನು ವಿಧಿಸುತ್ತಿರುವುದು ನಗರದಲ್ಲಿ ಕಂಡು ಬಂತು.