ನಟ ಕಲ್ಯಾಣ್ ಕುಮಾರ್ ಅವರ ವೃತ್ತಿ ಬದುಕಿನ ಯಶಸ್ಸಿಗೆ ದೊಡ್ಡ ಶಕ್ತಿಯಾಗಿದ್ದ ರೇವತಿಯವರು, ಹುಟ್ಟು ಕಲಾವಿದರ ಕುಟುಂಬದಿಂದಲೇ ಬಂದವರು. ಅವರ ತಾಯಿ ಸರೋಜಮ್ಮ ಕೂಡ ಕಲಾವಿದೆಯಾಗಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಟ ದಿವಂಗತ ಕಲ್ಯಾಣ್ ಕುಮಾರ್ ಪತ್ನಿ ರೇವತಿ ಕಲ್ಯಾಣ್ ಕುಮಾರ್ ಶನಿವಾರ (ಡಿ.23) ತಡರಾತ್ರಿ 2.30ಕ್ಕೆ ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು. ವಿಠಲಾಚಾರ್ಯ ಅವರು ನಿರ್ಮಿಸಿದ ‘ರಾಜಲಕ್ಷ್ಮೀ’ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣಿ ಮಾಡಿದ್ದ ರೇವತಿ ಅವರು, ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ನಟ ಕಲ್ಯಾಣ್ ಕುಮಾರ್ ಅವರ ವೃತ್ತಿ ಬದುಕಿನ ಯಶಸ್ಸಿಗೆ ದೊಡ್ಡ ಶಕ್ತಿಯಾಗಿದ್ದ ರೇವತಿಯವರು, ಹುಟ್ಟು ಕಲಾವಿದರ ಕುಟುಂಬದಿಂದಲೇ ಬಂದವರು. ಅವರ ತಾಯಿ ಸರೋಜಮ್ಮ ಕೂಡ ಕಲಾವಿದೆಯಾಗಿದ್ದರು. ಹೀಗಾಗಿ ರೇವತಿ ಅವರಿಗೂ ಚಿಕ್ಕದಿಂದಲೇ ಬಣ್ಣದ ನಂಟು ಬೆಳೆದಿತ್ತು. ‘ರಾಜಲಕ್ಷ್ಮೀ’ ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಬಂದ ಅವರು, ನಂತರ ಚಿತ್ತ ನಿರ್ಮಾಪಕರು ಆದರು. 1959ರಲ್ಲಿ ‘ಮನೆಗೆ ಬಂದ ಮಹಾಲಕ್ಷ್ಮೀ’ ಚಿತ್ರವನ್ನು ನಿರ್ಮಾಣ ಮಾಡಿದರು. ಅಲ್ಲದೆ, ‘ಎಂದೂ
ನಿನ್ನವನೆ’, ‘ಕಲ್ಲು ಸಕ್ಕರೆ’, ‘ಪ್ರವಾಸಿ ಮಂದಿರ’ ಚಿತ್ರಗಳು ಅವರದೇ ನಿರ್ಮಾಣದಲ್ಲಿ ಬಂದವು. ನಟಿ, ನಿರ್ಮಾಪಕಿಯೂ ಆಗಿದ್ದರಲ್ಲದೆ, ಉತ್ತಮ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದರು. ಹಲವು ಕಥೆ-ಕಾದಂಬರಿಗಳನ್ನೂ ಬರೆದಿದ್ದರು. ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
‘ಪ್ರವಾಸಿ ಮಂದಿರ’ ಚಿತ್ರಕ್ಕೆ ಗೀತೆಯೊಂದನ್ನು ರಚಿಸಿದ್ದರು. ಅವರಿಗೆ ‘ನಾಟಕ ಅಕಾಡೆಮಿ’, ‘ರಾಜ್ಯೋತ್ಸವ’ ಪ್ರಶಸ್ತಿ ಪಡೆದಿದ್ದ ರೇವತಿ ಕಲ್ಯಾಣ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಆಗಲಿದ್ದಾರೆ. ಸೋಮವಾರ (ಡಿ.25) ಮಧ್ಯಾಹ್ನ ಚೆನ್ನೈನ ವಿಜಯ ಚಿತಾಗಾರದಲ್ಲಿ ಅಂತಿಮ ವಿಧಿಗಳು ನಡೆಯಲಿವೆ ಎಂದು ಪುತ್ರ ಭರತ್ ಕಲ್ಯಾಣ್ ತಿಳಿಸಿದ್ದಾರೆ.
